ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕ್ರಮೇಣ ಇಳಿಕೆಯಾಗಿದ್ದು, ರಾಜ್ಯದಲ್ಲಿ 17 ಜಿಲ್ಲೆಗಳಿಗೆ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ. ಹೀಗಾಗಿ ಬರೋಬ್ಬರಿ 54 ದಿನಗಳ ಬಳಿಕ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಇಂದಿನಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಬಸ್ ಸಂಚಾರ ಪುನರ್ ಆರಂಭವಾಗಿದೆ.
ಕೊರೊನಾ ಉಲ್ಬಣಗೊಂಡಿರುವ ಕಾರಣ ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದೆ. ಹೀಗಾಗಿ, ಮೈಸೂರು ಮಾರ್ಗಕ್ಕೆ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಹಾಗೆಯೇ, ದಕ್ಷಿಣಕನ್ನಡ ಜಿಲ್ಲೆಯಲ್ಲೂ ಬಸ್ ಸಂಚಾರ ಇರುವುದಿಲ್ಲ. ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಬೇರೆ ಬಹುತೇಕ ಜಿಲ್ಲೆಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದ್ದರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಸ್ ಗಳು ರಸ್ತೆಗಿಳಿದಿಲ್ಲ. ಹೀಗಾಗಿ ಸಂಚಾರಕ್ಕೆ ಬಸ್ ಇದೆ ಎಂದು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕಾದು ಕಾದು ಕಂಗಾಲಾಗಿದ್ದಾರೆ.
ಇನ್ನೂ ಎರಡು ಡೋಸ್ ಪಡೆದ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಬೇಕು, ಶೇಕಡಾ 50ರಷ್ಟು ಮಾತ್ರ ಸೀಟು ಭರ್ತಿ ಮಾಡಿಕೊಂಡು ಹೋಗಬೇಕೆಂಬ ಸರ್ಕಾರದ ನಿಯಮ ಪ್ರಯಾಣಿಕರಿಗೆ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.










