ಇಂದಿನ ಪೀಳಿಗೆ ಸಾಹಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು : ಡಾ|| ಹೆಚ್.ಎಲ್.ನಾಗರಾಜ್.

88
firstsuddi

ಚಿಕ್ಕಮಗಳೂರು : ಇಂದಿನ ಪೀಳಿಗೆ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಡಾ|| ಹೆಚ್.ಎಲ್.ನಾಗರಾಜ್ ಸಲಹೆ ಮಾಡಿದರು.

ಕುಂಭಕ ಸಾಂಸ್ಕøತಿಕ ಪ್ರತಿಷ್ಠಾನ ನಗರದ ಕೆಂಪನಹಳ್ಳಿಯ ರಮೇಶ್ ಬೊಂಗಾಳೆ ಅವರ ನಿವಾಸದಲ್ಲಿ ನಿನ್ನೆ ಏರ್ಪಡಿಸಿದ್ದ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿ ಅದರ ಬಗ್ಗೆ ಆಸಕ್ತಿ ಬೆಳೆಯುತ್ತದೆ, ನಾವು ಬರಹಗಾರರಾಗಲು ಸ್ಪೂರ್ತಿ ಬರುತ್ತದೆ. ಸಮಾಜದಲ್ಲಿ ಸಾಹಿತ್ಯದ ಬೆಳವಣಿಗೆಯಾಗುತ್ತದೆ ಎಂದರು.

ಎಲೆಮರೆಯ ಕಾಯಿಯಂತಿರುವ ಸಾಹಿತಿಗಳನ್ನು ಬರಹಗಾರರನ್ನು ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದರೆ ಸಮಾಜದಲ್ಲಿ ಸಾಹಿತಿಗಳ ಸಂಖ್ಯೆ ಹೆಚ್ಚುತ್ತದೆ ಎಂದ ಅವರು ತಂದೆ ತಾಯಿಯ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಿ ಅದರ ಮೂಲಕ ಸಾಧಕರನ್ನು ಗೌರವಿಸುತ್ತಿರುವ ಕುಂಭಕ ಸಾಂಸ್ಕøತಿಕ ಪ್ರತಿಷ್ಠಾನದ ಕಾರ್ಯ ಸ್ತುತ್ಯಾರ್ಹವಾಗಿದ್ದು ಎಲ್ಲಾ ಸಂಘ ಸಂಸ್ಥೆಗಳು ಇದನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.

ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ರಮೇಶ್ ಬೊಂಗಾಳೆ ಅವರು ಕವಿಯಾಗಿ, ಸಾಹಿತಿಯಾಗಿ, ಬರಹಗಾರರಾಗಿ, ಅನುವಾದಕರಾಗಿ ಬೆಳೆದವರು, ಕಡುಬಡತನದಲ್ಲಿ ಬೆಳೆದು ಬಂದ ಬಹುಭಾಷಾ ವಿದ್ವಾಂಸ ರಮೇಶ್ ಬೊಂಗಾಳೆ ಅನೇಕರಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಭಕ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಬಹುಭಾಷಾ ವಿದ್ವಾಂಸರಾದ ರಮೇಶ್ ಬೊಂಗಾಳೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ತಮಗೆ ಸಾರ್ಥಕತೆ ತಂದಿದೆ ಎಂದರು.

ಲೇಖಕ ಹಳೇಕೋಟೆ ರಮೇಶ್, ಸಾಹಿತಿ ರಮೇಶ್ ಬೊಂಗಾಳೆ ಅವರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಬೊಂಗಾಳೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಿಗಿಂತ ತವರಿನಲ್ಲಿ ಸಿಕ್ಕಿರುವ ಪ್ರಶಸ್ತಿ ತಮಗೆ ಅತ್ಯಂತ ಸಂತಸ ಮತ್ತು ಹೆಮ್ಮೆ ತಂದಿದೆ ಎಂದು ಹೇಳಿದರು.

ಡಾ|| ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ ಕುಂಭಕ ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಚಂಚಲಾ ಅಶೋಕ್, ಜಿಲ್ಲಾ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಶಿಕ್ಷಕ ಶಿವನಂಜೇಗೌಡ, ರಕ್ಷಿತ್ ಬೊಂಗಾಳೆ ಉಪಸ್ಥಿತರಿದ್ದರು.