ಬಾಗಲಕೋಟೆ : ಇಂದಿರಾ ಗಾಂಧಿ ಅವರನ್ನು ಕೆಟ್ಟ ಶಬ್ದಗಳಿಂದ ಬೈಯ್ದಿದ್ದು, ಇದೇ ಸಿದ್ರಾಮಣ್ಣ. ಹೌದೋ ಅಲ್ವೋ ಹೇಳಿ, ನಮ್ಮ ಹತ್ರನೂ ರೆಕಾರ್ಡ್ ಇವೆ, ಹಾಕ್ತೀವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು, ವಿಪಕ್ಷ ನಾಯಕರಾಗಿದ್ದಾಗ ಇಂದಿರಾಗಾಂಧಿಗೆ ಬೆಂಬಲ ಕೊಟ್ಟಿದ್ದರು. ರಾಜೀವ್ ಮತ್ತು ಇಂದಿರಾ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ಆದರೆ ಈಗ ಅಧಿಕಾರಕ್ಕಾಗಿ ಇವತ್ತು ಅವರ ಕಾಲಿಗೆ ಅಡ್ಡ ಬಿದ್ದು, ನಮಸ್ಕಾರ ಮಾಡ್ತಾರೆ. ನಾಚಿಕೆ ಆಗಬೇಕು ಅವರಿಗೆ. ತಾವು ಸಿಎಂ ಆಗಬೇಕು ಎನ್ನುವ ಹುಚ್ಚಿನಲ್ಲಿ ಅವರ ಕಾಲಿಗೆ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ನಮ್ಮನ್ನ ಸಿಎಂ ಮಾಡಲಿಲ್ಲ ಅಂತಾ ಖರ್ಗೆ ಮತ್ತು ಪರಮೇಶ್ವರ್ ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರಿನಿಂದ ನಿಮ್ಮ ಪಾರ್ಟಿ ಸರ್ವನಾಶವಾಗಿ ಹೋಗುತ್ತದೆ. ಡಿಕೆಶಿಗೆ ಪರಮೇಶ್ವರ್, ಖರ್ಗೆ ಬಗ್ಗೆ ಚಿಂತೆಯಿಲ್ಲ. ಅವರಿಗೆ ಚಿಂತೆಯಿರೋದು ಸಿದ್ದರಾಮಯ್ಯನ ಬಗ್ಗೆ. ಸಿದ್ದರಾಮಯ್ಯ ಡಿಕೆಶಿಯನ್ನ ಸಿಎಂ ಆಗಲಿಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.










