ಬೆಂಗಳೂರು : ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಅದು ಜೂನ್ 14ರಿಂದ ಜಾರಿಗೆ ಬರಲಿದೆ. ಆದರೆ, ಲಾಕ್ ಡೌನ್ ವಿನಾಯ್ತಿ ಇಂದಿನಿಂದಲೇ ಜಾರಿಗೆ ಎಂಬಂತೆ ಜನರು ವರ್ತಿಸುತ್ತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಾರೆ. ಇದು ಸರಿಯಲ್ಲ. ಇನ್ನೂ ಎರಡು-ಮೂರು ದಿನ ಲಾಕ್ ಡೌನ್ ಸಂಪೂರ್ಣ ಇರಲಿದೆ. ಚಾಚೂ ತಪ್ಪದೆ ಜನರು ಪಾಲನೆ ಮಾಡಬೇಕು. ಪೊಲೀಸರೊಂದಿಗೆ ಜನ ಸಹಕರಿಸಬೇಕು. ಅನಗತ್ಯ ರಸ್ತೆಗಿಳಿದು ನಮ್ಮ ಪೊಲೀಸ್ ಪಡೆಯನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಬಾರದೆಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲವು ರಿಯಾಯಿತಿಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಕೈಗಾರಿಕಾ ಕ್ಷೇತ್ರಗಳಲ್ಲಿ ಶೇ.50ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಉತ್ಪಾದನೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕೆ ಮಾಲೀಕರೇ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಿಕೊಡಬೇಕು. ನಿಮ್ಮ ನಿಮ್ಮ ನೌಕರರಿಗೆ ವ್ಯಾಕ್ಸಿನೇಷನ್ ಮಾಡಲು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮಾಡುವಂತೆ ಸೂಚಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿ ಬೆಳಗ್ಗೆ 6ರಿಂದ 10ರ ಬದಲು 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಮಯ ವಿಸ್ತರಣೆ ಮಾಡಲಾಗಿದೆ. ಜನಸಂದಣಿ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಇದರಿಂದ ಅನುಕೂಲವಾಗಲಿದೆ. ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳಾದ ಮಾಲ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದರು.
ಕಾಂಗ್ರೆಸ್ ಒಂದು ರೀತಿಯಲ್ಲಿ ಎಲ್ಲವನ್ನೂ ಉಲ್ಲಂಘನೆ ಮಾಡುವ ಪ್ರವೃತ್ತಿ ಮಾಡುತ್ತಿದೆ. ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಎಂದರೆ ಯಾಕೆ ಹಾಕಿಸಿಕೊಳ್ಳಬೇಕು? ಮೊದಲು ಮೋದಿ ಹಾಕಿಸಿಕೊಳ್ಳಲಿ ಎನ್ನುತ್ತಿದ್ದರು. ಈಗ ವ್ಯಾಕ್ಸಿನ್ ಎಲ್ಲಿ ಎಂದು ಕೇಳುತ್ತಿದ್ದಾರೆ. ಇದೀಗ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಅವರು ನಕಾರಾತ್ಮಕ ರಾಜಕೀಯ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.










