ಎತ್ತಿನಹೊಳೆ ಯೋಜನೆ ಪೂರ್ಣ ಆದರೆ ನೇಣು ಹಾಕಿಕೊಳ್ಳುತ್ತೇನೆ : ಭೋಜೇಗೌಡ ಸವಾಲ್.

85
firstsuddi

ಬೆಂಗಳೂರು : ಎತ್ತಿನಹೊಳೆ ಯೋಜನೆ ಪೂರ್ಣ ಆದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಜೆಡಿಎಸ್ ನ ಸದಸ್ಯ ಭೋಜೇಗೌಡ ಅವರು ಇಂದು ನಡೆಯುತ್ತಿರುವ ವಿಧಾನಪರಿಷತ್ ನಲ್ಲಿ ಸವಾಲು ಹಾಕಿದ್ದಾರೆ.

ನಿಯಮ 72ರ ಅಡಿ ಕಾಂಗ್ರೆಸ್ ನ ರಾಜೇಂದ್ರ ರಾಜಣ್ಣ ಎತ್ತಿನಹೊಳೆ ಯೋಜನೆ ವಿಷಯ ಪ್ರಸ್ತಾಪ ಮಾಡಿದರು. ಬಯಲು ಸೀಮೆಯ 7 ಜಿಲ್ಲೆಗಳಿಗೆ ನೀರು ಕೊಡಲು ಎತ್ತಿನಹೊಳೆ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆ ಕೂಡಲೇ ಪ್ರಾರಂಭ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಎತ್ತಿನಹೊಳೆ ಯೋಜನೆಗೆ 12,912.36 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಯೋಜನೆ ಪ್ರಾರಂಭದಿಂದ ಜನವರಿ 2022 ಅಂತ್ಯದವರೆಗೆ 9268.76 ಕೋಟಿ ಸಂಚಿತ ವೆಚ್ಚ ಮಾಡಲಾಗಿರುತ್ತದೆ. ಭೂಸ್ವಾಧೀನ ಸಮಸ್ಯೆ, ಪರಿಸರ, ಅರಣ್ಯ ತೀರುವಳಿ, ಗ್ರೀನ್ ಟ್ರುಬ್ಯುನಲ್, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕೋವಿಡ್‍ನಿಂದಾಗಿ ಯೋಜನೆ ವಿಳಂಬವಾಗಿದೆ. ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಯೋಜನೆ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ಎದ್ದು ನಿಂತ ಜೆಡಿಎಸ್ ನ ಭೋಜೇಗೌಡ, 22 ಸಾವಿರ ಕೋಟಿ ಅಲ್ಲ 50 ಸಾವಿರ ಕೋಟಿ ಖರ್ಚು ಮಾಡಿದರು ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಇದು ನನ್ನ ಚಾಲೆಂಜ್. ಎತ್ತಿನಹೊಳೆ ಯಾರ್ ಯಾರಿಗೆ ಇದು ಕಾಮಧೇನು ಅಂತ ನಮಗೆ ಗೊತ್ತಿದೆ. ಒಂದು ವೇಳೆ ಈ ಯೋಜನೆ ಆದರೆ ನಾನು ನೇಣು ಹಾಕಿಕೊಳ್ತೀನಿ ಅಂತ ಸವಾಲ್ ಹಾಕಿದರು.