ಮಂಡ್ಯ : 2 ವರ್ಷದಿಂದ ಬಗೆಹರಿಯದ ವಿಶೇಷಚೇತನ ವ್ಯಕ್ತಿಯ ಆಧಾರ್ ಕಾರ್ಡ್ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎರಡೇ ದಿನದಲ್ಲಿ ಬಗೆಹರಿಸಿದ್ದಾರೆ.
ಮಂಡ್ಯದ ತಂಡಸನಹಳ್ಳಿ ಗ್ರಾಮದ ನೂತನ್ ಹುಟ್ಟುತ್ತಲೇ ಅಂಗವಿಕಲತೆ ಹಾಗೂ ವಿಚಿತ್ರ ಚರ್ಮ ರೋಗಕ್ಕೆ ತುತ್ತಾಗಿದ್ದಾರು. ಮೊದಲು ನೂತನ್ ಅವರ ಭಾವಚಿತ್ರದ ಆಧಾರದ ಮೇಲೆ ಅವರಿಗೆ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದರು. ಆಗನಿಂದಲೂ ಅವರಿಗೆ ಪಿಂಚಣಿ ಹಣ ಸೇರಿ ಸರ್ಕಾರಿ ಸವಲತ್ತುಗಳು ದೊರೆಯುತ್ತಿದ್ದವು. ಆದ್ರೆ, ಕಳೆದ ಎರಡೂವರೆ ವರ್ಷದ ಹಿಂದೆ ಇವರಿಗೆ ಬರುತ್ತಿದ್ದ ಪಿಂಚಣಿ ಹಾಗೂ ಸರ್ಕಾರಿ ಸವಲತ್ತುಗಳು ನಿಂತಿದ್ದವು.
ಈ ಬಗ್ಗೆ ವಿಚಾರಿಸಿದಾಗ, ನಿಮ್ಮ ಆಧಾರ್ ಕಾರ್ಡ್ ಬ್ಲಾಕ್ ಆಗಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸುವಂತೆ ಅಧಿಕಾರಿಗಳು ಹೇಳಿದ್ದರು. ಅದರಂತೆ ನೂತನ್ ಹಾಗೂ ಕುಟುಂಬಸ್ಥರು ಆಧಾರ್ ಕಾರ್ಡ್ ಕಚೇರಿಗೆ ಹೋಗಿದ್ದಾರೆ. ಅಲ್ಲಿ ನೂತನ್ ಅವರ ಹೆಬ್ಬರಳು, ಕಣ್ಣುಗಳ ಸ್ಕ್ಯಾನ್ ತೆಗೆದುಕೊಳ್ಳುತ್ತಿರಲಿಲ್ಲ. ಕಚೇರಿಯವರು ಇದು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದರು. ಈ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಇವರು ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. 2 ವರ್ಷವಾದರೂ ಯಾರೂ ಸಹ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ.
ಕಳೆದ 3 ದಿನಗಳ ಹಿಂದೆ ಮಂಡ್ಯ ರೈತ ಮುಖಂಡ ಮಧುಚಂದನ್ ನೂತನ್ ಫೋಟೊವನ್ನು ಹಾಕಿ, ಇವರಿಗೆ ಚರ್ಮ ರೋಗ ಇದೆ, ಆಧಾರ್ ಕಾರ್ಡ್ ಗೆ ಬೆರಳಚ್ಚು ಆಗುತ್ತಿಲ್ಲ. ಇದರಿಂದ ಇವರು ಸರ್ಕಾರಿ ಸೌಲಭ್ಯದಿಂದ ವಂಚಿತನಾಗಿದ್ದಾರೆ. ಆಧಾರ್ ಕಾರ್ಡ್ ನ್ನು ಹೇಗೆ ಸರಿಪಡಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ನೋಡಿದ ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಳಿಕ ಅಧಿಕಾರಿಗಳು ನೂತನ್ ಗೆ ಕರೆ ಮಾಡಿ, ಸಮಸ್ಯೆಗಳನ್ನು ಆಲಿಸಿ ಅವರಿಗೆ ಆಧಾರ್ ಕಾರ್ಡ್ ಅನ್ನು ಅಪ್ ಡೇಟ್ ಮಾಡಿ ಅವರ ಮನೆಗೆ 2 ದಿನದಲ್ಲಿ ಕಳುಹಿಸಿದ್ದಾರೆ. ನೂತನ್ ಮತ್ತು ಅವರ ಕುಟುಂಬಸ್ಥರು ರೈತ ಮುಖಂಡ ಮಧುಚಂದನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.










