ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು : ಹಂಸಲೇಖ.

71
firstsuddi

ಶಿವಮೊಗ್ಗ : ಕನ್ನಡಕ್ಕೆ ಮಹಾಮನೆ ಕಲ್ಯಾಣ, ಕವಿಮನೆ ಕವಿಶೈಲವಾಗಿದೆ. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಬೇಸರ ವ್ಯಕ್ತಪಡಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಕನ್ನಡ ಸಾಹಿತಿಗಳಿಗೆ ಆದ ಅಪಮಾನವನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಯಿಂದ ಪಾದಯಾತ್ರೆ ಪ್ರಾರಂಭಿಸಿದೆ. ಇದರ ನೇತೃತ್ವವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಹಿಸಿದ್ದು, ಹಂಸಲೇಖ ಸಹ ಸಾಥ್ ಕೊಟ್ಟಿದ್ದಾರೆ. ಪಾದೆಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಹಂಸಲೇಖ ಅವರು, ಅಂದು ಗೋಕಾಕ್ ಚಳವಳಿ ನಡೆದಿತ್ತು, ಇಂದು ಕುಪ್ಪಳ್ಳಿಯಿಂದ ಕನ್ನಡದ ಕಹಳೆ ಮೊಳಗಿದೆ. ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ. ಇವರಿಬ್ಬರಿಗೂ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು ಎಂದು ಪ್ರಶ್ನಿಸಿದರು.

ತಮಿಳಿಗರ ರೀತಿ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ. ನಾವು ಭಾಷಾಂಧರು ಅಂದರೂ ಸರಿ ಅವರನ್ನು ನಾವು ಅನುಸರಿಸಬೇಕು. ಅಲ್ಲಿ ಭಾಷೆಗೆ ಧಕ್ಕೆಯಾದರೆ ಆಳುವವರು, ವಿಪಕ್ಷದವರು ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಇದು ನಾಡಿನಾದ್ಯಂತ ಮೊಳಗಬೇಕು ಎಂದು ಕರೆ ಕೊಟ್ಟರು.

ನಮ್ಮದು ನಾಡಗೀತೆ ಅಲ್ಲ, ನಾಡೇ ಒಂದು ಗೀತೆ, ನಾಡೇ ನಮಗೆ ಒಂದು ಧ್ವಜ, ಇವೆರಡಕ್ಕೂ ಅವಮಾನವಾಗಿದೆ. ಕನ್ನಡದ ನಡೆ ಮುರಿಯುವ ನಡೆ ರಾಜ್ಯದಲ್ಲಿ ಆರಂಭವಾಗಿದೆ. ಈ ತರಹದ ಹೋರಾಟಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಹೇಳಿದರು.