ಮೂಡಿಗೆರೆ: ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ಮೂಲಕ ಪಶ್ಚಿಮ ಘಟ್ಟದ ಅಂಚಿನಲ್ಲಿ ವಾಸಿಸುವ ಜನರ ಬದುಕಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಎಂಕೆ ಪ್ರಾಣೇಶ್ ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಬಾಳೂರಿನಲ್ಲಿ ನಡೆದ ಮೌನ ಪ್ರತಿಭಟನಾ ಮೆರವಣಿಗೆಯ ಬಳಿಕ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಜನರಿಗೆ ಸಂಕಷ್ಟ ಎದುರಾದಾಗ ಹೋರಾಟವೇ ದಾರಿಯಾಗಿದ್ದು, ಯಾವುದೇ ಒಡಕಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ‘ಇದು ನಮ್ಮ ಗ್ರಾಮಕ್ಕೆ ಅನ್ವಯಿಸುವುದಿಲ್ಲ’ ಎಂಬ ಭಾವನೆ ಕೆಲವರಲ್ಲಿದೆ. ಆದರೆ ಮುಂದಿನ ದಿನಗಳಲ್ಲಿ ವರದಿ ಎಲ್ಲೆಡೆ ವ್ಯಾಪಿಸುವ ಸಾಧ್ಯತೆಯಿದ್ದು, ಮರ ಇರುವ ಪ್ರದೇಶಗಳಿಗೂ ಅನ್ವಯವಾಗುವ ಪರಿಸ್ಥಿತಿ ಬರಬಹುದು. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ಎದುರಾಗುವುದು ಖಚಿತ ಎಂದರು.
ಮಲೆನಾಡಿನ ಪರಿಸರ ಮತ್ತು ಜನರ ಬದುಕಿನ ಕುರಿತು ಹಲವು ಸಮೀಕ್ಷೆ ಹಾಗೂ ಸಂಶೋಧನೆಗಳು ನಡೆಯುತ್ತಿದ್ದು, ನಮ್ಮ ಬದುಕು ಶಾಶ್ವತವಲ್ಲ ಎಂಬ ಆತಂಕ ಮೂಡಿದೆ. ಕಚೇರಿಯಲ್ಲಿ ಕುಳಿತ ಅಧಿಕಾರಿಗಳು ನಿರ್ಧರಿಸುವ ಕಾಲ ಬದಲಾಗಬೇಕು. ವೈಜ್ಞಾನಿಕ ವರದಿಗಳ ಆಧಾರದ ಮೇಲೆ ಸ್ಥಳೀಯ ಜನರ ಬದುಕಿಗೆ ರಕ್ಷಣೆ ನೀಡುವಂತಹ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಮಾತನಾಡಿ, ಕಾಫಿ ಮಂಡಳಿಯಂತಹ ಸಣ್ಣ ಸಂಸ್ಥೆಯೇ ತಂತ್ರಜ್ಞಾನ ಬಳಸಿಕೊಂಡು ಪ್ರತಿ ಕಾಫಿ ತೋಟದಲ್ಲಿರುವ ಮರಗಳ ಸಂಖ್ಯೆ ಹಾಗೂ ಹಸಿರು ಪ್ರದೇಶದ ಪ್ರಮಾಣವನ್ನು ಗುರುತಿಸುವ ವ್ಯವಸ್ಥೆ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ತೋಟದಲ್ಲಿ ಎಷ್ಟು ಹಸಿರು ಉಳಿಯಲಿದೆ ಎಂಬುದನ್ನು ಅಂದಾಜಿಸುವ ತಂತ್ರಜ್ಞಾನ ಇಂದಿನ ಆಧುನಿಕ ಯುಗದಲ್ಲಿ ಲಭ್ಯವಿದೆ. ಹೀಗಿರುವಾಗ ಕಾಡು ಮತ್ತು ನಾಡನ್ನು ಪ್ರತ್ಯೇಕಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾಡು ಮತ್ತು ಕಾಫಿ ತೋಟಗಳನ್ನು ವೈಜ್ಞಾನಿಕವಾಗಿ ಪ್ರತ್ಯೇಕಿಸಿ, ಕೇರಳ ಮಾದರಿಯಲ್ಲಿ ವರದಿ ರೂಪಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಪಶ್ಚಿಮ ಘಟ್ಟವನ್ನು ಹಿಂದಿನಿಂದಲೂ ಸಂರಕ್ಷಿಸಿಕೊಂಡು ಬಂದಿರುವ ನಮ್ಮ ಹಿರಿಯರು ಅದನ್ನು ನಮಗೆ ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳಲು ಇಂದು ಪ್ರತಿಭಟನೆ ಮಾಡುವ ಪರಿಸ್ಥಿತಿಯನ್ನು ಸರ್ಕಾರಗಳು ನಿರ್ಮಿಸಿರುವುದು ಬೇಸರದ ಸಂಗತಿ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಬಡವರ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ವರದಿಯನ್ನು ಕೈಬಿಡಬೇಕು. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯ ಜನರ ಬದುಕಿನ ಹಕ್ಕುಗಳಿಗೆ ಧಕ್ಕೆಯಾಗಬಾರದು. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭರತ್ ಬಾಳೂರು, ರೈತ ಮತ್ತು ಬೆಳೆಗಾರರ ಹಿತರಕ್ಷಣಾ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಲಕ್ಷ್ಮಣಗೌಡ, ವಿಭಾ, ಸುಶ್ಮಾ, ಶ್ರೀನಾಥ್, ಕಲ್ಲೇಶ್, ಮನೋಜ್, ದೀಪಕ್, ದೊಡ್ಡಯ್ಯ, ಮಂಜುನಾಥ್ ಬಾಳೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.










