ಬೀದರ್ : ಕಾಂಗ್ರೆಸ್ ಗೆ 50 ವರ್ಷಗಳಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡೋಕೆ ಆಗಿಲ್ಲ. ಇದೀಗ ಕಾಂಗ್ರೆಸ್ ಲಿಂಗಾಯತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದರು.
ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಲಿಂಗಾಯತರು ಅಷ್ಟೇ ಅಲ್ಲಾ, ಎಲ್ಲಾ ಸಮುದಾಯಕ್ಕೆ ಮಾಡಿದ್ದನ್ನು ತಿಳಿಸಬೇಕಿದೆ. ಹೀಗಾಗಿ ಯಡಿಯೂರಪ್ಪನವರ ಸಭೆಯಲ್ಲಿ ತಿರ್ಮಾನ ಮಾಡಿದ್ದಾರೆ. ಲಿಂಗಾಯತರಿಗೆ ಅತಿ ಹೆಚ್ಚು ಸೀಟುಗಳು ಕೊಟ್ಟಿದ್ದು ಬಿಜೆಪಿ ಎಂದರು.
ಲಿಂಗಾಯತ ಸಮಾಜವನ್ನ ಒಡೆಯುವಂತ ಕೆಲಸ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ 50 ವರ್ಷದಿಂದ ಲಿಂಗಾಯತರನ್ನ ಸಿಎಂ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಎಸ್.ನಿಜಲಿಂಗಪ್ಪ ಹೊರತುಪಡಿಸಿದರೇ ಲಿಂಗಾಯತ ಸಿಎಂ ಯಾರೂ ಕೂಡ ಆಗಿಲ್ಲ. ಇದರ ಜೊತೆ ಕಾಂಗ್ರೆಸ್ ವಿರೇಂದ್ರ ಪಾಟೀಲ್ ರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.










