ಹುಬ್ಬಳ್ಳಿ : ಕಾಂಗ್ರೆಸ್ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಬರೀ ವಿಸಿಟಿಂಗ್ ಕಾರ್ಡ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಆಶ್ವಾಸನೆಗಳನ್ನು ನೀಡಿದ್ದು, ಇಂದಿಗೂ ಈಡೇರಿಸಲಿಲ್ಲ. ಇದು ಅವರ ಟ್ರ್ಯಾಕ್ ರೆಕಾರ್ಡ್. ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ಘೋಷಣೆ ಮಾಡಿದ್ದನ್ನು ಅವರು ಈಡೇರಿಸಲಿಲ್ಲ. ಛತ್ತೀಸ್ ಗಢದಲ್ಲಿ ಪ್ರತಿ ಮನೆಗೆ ಒಂದು ಸಾವಿರ ರೂ. ನೀಡುವುದಾಗಿ ಹೇಳಿದ್ದರು. ನಾಲ್ಕು ವರ್ಷ ನೀಡದೇ ಕೊನೆಯ ವರ್ಷ ಕೊಡಲು ಓಡಾಡಿದರು. ಈ ರೀತಿಯಾಗಿ ಜನರನ್ನು ಯಾಮಾರಿಸುತ್ತಾರೆ ಎಂದರು.
ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಯವುದೇ ಪರಿಣಾಮ ಬೀರಲ್ಲ. ಇವರು ಭಾರತ್ ಜೋಡೋ ಯಾತ್ರೆಯನ್ನು ಮಾಡಿದ್ದು, ಯಾವುದೇ ಪರಿಣಾಮ ಉಂಟಾಗಲಿಲ್ಲ. ಸೋಮವಾರ ಹುಬ್ಬಳ್ಳಿಯಲ್ಲಿ ಮಾಡಿದ ಘೋಷಣೆಗಳಿಂದ ಯಾವುದೇ ಪರಿಣಾಮವಾಗುವುದಿಲ್ಲ. ಅವರು ಕಳೆದ ಬಾರಿ ರಾಜ್ಯಕ್ಕೆ ಬಂದಿರುವುದಕ್ಕೆ ಹಾಗೂ ಈ ಸಲ ಬಂದಿರುವುದಕ್ಕೆ ಬಹಳಷ್ಟು ವ್ಯತ್ಯಾಸಗಳಿವೆ. ಅವರ ಮಾತಿಗೆ ಜನರು ಯಾವುದೇ ಬೆಲೆಯನ್ನು ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಉರಿಗೌಡ-ನಂಜೇಗೌಡ ಪ್ರಕರಣದಲ್ಲಿ ಹಿನ್ನಡೆಯಾಗಿರುವ ಪ್ರಶ್ನೆಯೇ ಇಲ್ಲ. ಸತ್ಯ ಸಂಶೋಧನೆಯಾಗಿ ಸತ್ಯ ಹೊರಗೆ ಬಂದಾಗ ಜಯ ದೊರೆಯಲಿದೆ. ಹಲವಾರು ಐತಿಹಾಸಿಕ ಸತ್ಯಗಳನ್ನು ಮರೆಮಾಚಲಾಗಿದೆ. ಇತಿಹಾಸವನ್ನು ಭಾರತ ಹಾಗೂ ಕರ್ನಾಟಕದಲ್ಲಿ ತಿರುಚಿರುವ ಕೆಲಸವಾಗಿದೆ. ಆ ಸಂದರ್ಭದಲ್ಲಿ ಯಾರು ಪ್ರಮುಖ ಪಾತ್ರವಹಿಸಿದ್ದರು ಎಂಬುವುದು ಜಗಜ್ಜಾಹೀರಾಗಿದೆ. ಸತ್ಯವನ್ನು ಹೇಳಿದರೆ ಇವರಿಗೆ ತಡೆಯಲು ಆಗುವುದಿಲ್ಲ ಎಂದು ಟೀಕಿಸಿದರು.
ಬಾಬುರಾವ್ ಚಿಂಚನಸೂರ್ ಅವರು ಕಾಂಗ್ರೆಸ್ ನಲ್ಲಿದ್ದವರು. ಈಗ ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಆ ಕ್ಷೇತ್ರದಲ್ಲಿ ನಮ್ಮ ಸಂಘಟನೆ ಉತ್ತಮವಾಗಿದೆ. ಗುರುಮಿಠಕಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾರ್ಚ್ 25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಮಾರ್ಚ್ 24 ಮತ್ತು 26 ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.










