ಬೆಂಗಳೂರು : ಜೆಡಿಎಸ್ ಮಾಜಿ ಶಾಸಕ ವೈಎಸ್ವಿ ದತ್ತ ಅವರು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನ ಮತ್ತು ದೇವೇಗೌಡರ ರಾಜಕೀಯ 50 ವರ್ಷ ಸುದೀರ್ಘವಾದುದ್ದು. ದೇವೇಗೌಡರ ಜೊತೆ ನಾನು 20 ವರ್ಷಗಳಿಂದ ಇದ್ದೇನೆ. ನನಗೂ ಅವರಿಗೆ ತಂದೆ ಮಗನ ಸಂಬಂಧ. ನಾನು ದೇವೇಗೌಡರು ಇರುವವರೆಗೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೆ. ಆದರೆ ನಮ್ಮ ಕ್ಷೇತ್ರದ ಕೋಮುವಾದಿಗಳ ಜೊತೆ ಸೆಣಸಬೇಕು ಅಂದ್ರೆ ಕಾಂಗ್ರೆಸ್ ಸೇರಬೇಕು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಒತ್ತಾಯವಾಗಿದೆ ಎಂದು ತಿಳಿಸಿದರು.
ತಂದೆ ಸಮಾನರಾದ ದೇವೇಗೌಡರಿಗೆ ಈ ವಿಚಾರ ಹೇಳದೆ ಒದ್ದಾಡುತ್ತಿದ್ದೇನೆ. ನಾನು ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ. ನಾನು ಹತ್ತಾರು ಭಾರೀ ಈ ವಿಚಾರ ಹೇಳಲು ದೇವೇಗೌಡರನ್ನು ಭೇಟಿಯಾಗಿದ್ದೆ, ಆದ್ರೆ ಅದು ಸಾಧ್ಯವಾಗಿಲ್ಲ. ನನ್ನ ಎಂಎಲ್ಸಿ ಮಾಡಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು. ಅವರ ಋಣ ನನ್ನ ಮೇಲೆ ಇದೆ. ಅದಕ್ಕಾಗಿ ನಾನು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಖರ್ಗೆಯವರನ್ನು ಭೇಟಿಯಾಗಿಲ್ಲ. ಸಿದ್ದರಾಮಯ್ಯ ಅವರನ್ನು ಹಲವು ಭಾರಿ ಭೇಟಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರನ್ನು ಕೂಡ ಭೇಟಿಯಾಗಿದ್ದೇನೆ. ಸೇರ್ಪಡೆ ಬಗ್ಗೆ ದಿನಾಂಕ ನಿಗದಿಯಾಗಿಲ್ಲ. ಸೇರ್ಪಡೆ ವಿಚಾರ ಚಾಲು ಆಗಿದೆ ಅಷ್ಟೇ ಎಂದರು.










