ಬೆಂಗಳೂರು: ಕಾಂಬೋಡಿಯಾದಲ್ಲಿ ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಅಪಾಯದಲ್ಲಿರುವ ತೀರ್ಥಹಳ್ಳಿ ಪಟ್ಟಣದ ಸಾಫ್ಟ್‌ವೇರ್ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಥಾಯ್ಲೆಂಡ್ ನಲ್ಲಿ ಹೆಚ್ಚಿನ ಸಂಬಳ ದೊರಕಿಸಿಕೊಡುವುದಾಗಿ ನೇಮಕಾತಿ ಏಜೆನ್ಸಿ ಆಮಿಷ ಒಡ್ಡಿತ್ತು. ಅದರಂತೆ ಕಿರಣ್ ಶೆಟ್ಟಿ ತೆರಳಿದ್ದರು. ಸದ್ಯ ಅವರು ಕಾಂಬೋಡಿಯಾದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹಾಗೂ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರಳೀಧರನ್ ಅವರ ಕಚೇರಿ ಜೊತೆ ಸಂಪರ್ಕಿಸಿ ಬಿಡುಗಡೆ ಕುರಿತು ಅರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೂ ಟೆಕ್ಕಿಯ ಸುರಕ್ಷಾ ಹಿಂದುವರಿಕೆ ಬಗ್ಗೆ ಸಚಿವರು ಚರ್ಚಿಸಿದ್ದಾರೆ.
ಕಿರಣ್ ಶೆಟ್ಟಿ ಅವರನ್ನು ದುಷ್ಕರ್ಮಿಗಳಿಂದ ಬಿಡಿಸಿ ಕೊಡುವಂತೆ ಅವರ ಸಹೋದರ ಪವನ್ ಶೆಟ್ಟಿ ಗೃಹ ಸಚಿವರಿಗೆ ಮನವಿ ಮಾಡಿದ್ದರು. ಕಿರಣ್ ಶೆಟ್ಟಿ ಅವರಿಗೆ ಪತ್ನಿ ಹಾಗೂ ನಾಲ್ಕು ತಿಂಗಳ ಮಗು ಇದ್ದು, ಕಿರಣ್ ಶೆಟ್ಟಿ ಮರಳುವಿಕೆಗಾಗಿ ಕುಟುಂಬದವರ ಜೊತೆ ತೀರ್ಥಹಳ್ಳಿಯಲ್ಲಿ ಕಾಯುತ್ತಿದ್ದಾರೆ.










