ಚಿಕ್ಕಮಗಳೂರು : ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ…

86
firstsuddi

ಚಿಕ್ಕಮಗಳೂರು : ನಗರದ ಕುವೆಂಪು ವಿದ್ಯಾನಿಕೇತನ ಐಸಿಎಸ್‍ಸಿ ಆಂಗ್ಲ ಮಾಧ್ಯಮ ಶಾಲೆ ಇಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಭಾಷಾಭಿಮಾನವನ್ನು ಮೆರೆಯಿತು.

ನುಡಿ ಹಬ್ಬದ ಹಿನ್ನೆಲೆಯಲ್ಲಿ ಆಂಗ್ಲ ಶಾಲೆಯ ಆವರಣದಲ್ಲಿ ಕನ್ನಡದ ಕಂಪು, ಕಲರವ, ನಾಡಧ್ವಜ ರಾರಾಜಿಸಿತು, ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮವಸ್ತ್ರವನ್ನು ಬದಿಗಿಟ್ಟು ಸಾಂಪ್ರದಾಯಿಕ ಧಿರಿಸಿನ ಜೊತೆಗೆ ಕನ್ನಡದ ಕವಿಗಳ ವೇಷಭೂಷಣ ತೊಟ್ಟು ನಾಡ ಹಬ್ಬಕ್ಕೆ ಕಳೆ ತಂದರು.

ವಿದ್ಯಾರ್ಥಿಗಳು ಪಠ್ಯವನ್ನು ಮರೆತು ನಾಡು ನುಡಿಯ ಇತಿಹಾಸ ಸಾರುವ ಗೀತೆಗಳ ಗಾಯನ, ನೃತ್ಯ, ನಾಟಕದೊಂದಿಗೆ ಸಂಭ್ರಮಿಸಿದರೆ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲ್ಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ವಿದ್ಯಾರ್ಥಿಗಳೊಂದಿಗೆ ಬೆರೆತು ರಾಷ್ಟ್ರಕವಿ ಕುವೆಂಪು ವಿರಚಿತ ಬೆರಳ್‍ಗೆ ಕೊರಳ್ ನಾಟಕದ ದ್ರೋಣಾಚಾರ್ಯರ ಪಾತ್ರವನ್ನು ಅಭಿನಯಿಸಿ ಮನ ಗೆದ್ದರೆ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಜಾನಪದ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.

ನಾಡಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಕರ್ನಾಟಕ ಕೇವಲ ನಾಡಲ್ಲ, ಅದು ನಮ್ಮ ಸಂಸ್ಕೃತಿಯ ಧಾತು, ಕನ್ನಡ ಬರೀ ಭಾಷೆಯಲ್ಲ ಅದು ನಮ್ಮ ಮನದಾಳದ ಮಾತು ಎಂದರು.

ಕನ್ನಡ ಭಾಷೆಯ ಹಿಂದೆ ಬಹುದೊಡ್ಡ ಸಂಸ್ಕೃತಿಯಿದೆ, ನಮ್ಮ ಹಿಂದಿನ ರಾಜಮಹಾರಾಜರು, ಆದಿಕವಿ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಮುಂತಾದ ಸಾಹಿತಿಗಳು, ಕನಕದಾಸರು, ಪುರಂದರ ದಾಸರು ಸೇರಿದಂತೆ ದಾಸ ಪರಂಪರೆ ಕಲೆ, ಸಾಹಿತ್ಯ, ಸಂಗೀತ, ವಚನ, ಶಿಲ್ಪ ಕಲೆಯ ಮೂಲಕ ನಾಡಿನ ಸಂಸ್ಕೃತಿಯನ್ನು ವಿಶ್ವವೇ ಬೆರಗಾಗುವಂತೆ ಬೆಳೆಸಿದೆ ಎಂದು ಹೇಳಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಮಾತನಾಡಿ ಕನ್ನಡಿಗರು ಜಾತಿ, ಮತದ ಬೇಧಗಳನ್ನು ಬದಿಗೊತ್ತಿ ಭಾವನಾತ್ಮಕವಾಗಿ ಒಂದಾಗಬೇಕು, ಕನ್ನಡವನ್ನು ಬೆಳೆಸಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಅದನ್ನು ಮುಂದಿನ ತಲೆಮಾರಿಗೆ ಉಳಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್ ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಕಿ ವಸುದಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಂಶುಪಾಲ ವಿ.ಎಸ್.ರಾಘವೇಂದ್ರ, ಮುಖ್ಯ ಶಿಕ್ಷಕಿ ಹೊನ್ನಾಂಬಿಕಾ, ವಿದ್ಯಾರ್ಥಿಗಳಾದ ಪ್ರಾಂಜಲಿ, ಗಂಗಾ, ಐಶಮ್ಯ ಉಪಸ್ಥಿತರಿದ್ದರು.