ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ – ಪ್ರಮುಖ ಆರೋಪಿಯ ಬಂಧನ…

56
firstsuddi

ಬೆಳಗಾವಿ : ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಪ್ರಮುಖ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.

ಜಿಲ್ಲೆಯ ಗೋಕಾಕ್ ತಾಲೂಕಿನ ಸಂಜೀವ ಲಕ್ಷ್ಮಣ ಭಂಡಾರಿ ಬಂಧಿತ ಕಿಂಗ್‌ಪಿನ್. ಬಂಧಿತ ಆರೋಪಿಯನ್ನು ಪೊಲೀಸರು ಗೋಕಾಕ್ ನ ಪ್ರಿನ್ಸಿಪಲ್ ಜೆಎಂಎಫ್‌ಸಿಗೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 7 ದಿನಗಳವರೆಗೆ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಕಳೆದ ಆಗಸ್ಟ್ 7 ರಂದು ಕೆಪಿಟಿಸಿಎಲ್ ನ ಕಿರಿಯ ಅಭಿಯಂತರ (ಜೆಇ) ನೇಮಕಾತಿ ಪರೀಕ್ಷೆ ಸಮಯದಲ್ಲಿ ಗೋಕಾಕ್ ನಗರದ ಜೆಎಸ್ ಎಸ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಆರೋಪಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಟ್ ವಾಚ್ ನ ಕ್ಯಾಮೆರಾ ಮೂಲಕ ಪ್ರಶ್ನೆ ಪತ್ರಿಕೆಯನ್ನು ಫೋಟೋ ತೆಗೆದು ಟೆಲಿಗ್ರಾಂ ಮೂಲಕ ಪ್ರಮುಖ ಆರೋಪಿ ಸಂಜೀವ ಭಂಡಾರಿಗೆ ರವಾನಿಸಿದ್ದನು. ಇತ್ತ ಸಂಜೀವ ಭಂಡಾರಿ ಪರೀಕ್ಷಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬ್ಲೂಟೂತ್‌ ಡಿವೈಸ್‌ಗಳನ್ನು ರವಾನಿಸುತ್ತಿದ್ದ. ಈ ಅಕ್ರಮದ ಕುರಿತು ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸಂಜೀವ ಭಂಡಾರಿ ತಲೆಮರೆಸಿಕೊಂಡಿದ್ದನು. ಅಲ್ಲದೇ ವಕೀಲರ ಮೂಲಕ ಎರಡು ಬಾರಿ ಜಾಮೀನಿಗಾಗಿ ಸಂಜೀವ ಭಂಡಾರಿ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆರೋಪಿ ಅರ್ಜಿಯನ್ನು ತಿರಸ್ಕರಿಸಿತು.

ಆರೋಪಿ ಸಂಜೀವ ಪೊಲೀಸ್ ಪೇದೆಯ ಮಗನಾಗಿದ್ದು, ಈ ಹಿಂದೆ ನಡೆದ ಪೊಲೀಸ್ ಪೇದೆ ಪರೀಕ್ಷೆ ಅಕ್ರಮದಲ್ಲೂ ಜೈಲಿಗೆ ಹೋಗಿ ಬಂದಿದ್ದನು. ಒಟ್ಟಾರೆ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 13ಕ್ಕೇರಿದೆ.