ಕೋಲಾರ : ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

ಮೃತರನ್ನು ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ ಶಹಬಾಜ್ ಅಹಮದ್ ಎಂದು ಗುರುತಿಸಲಾಗಿದೆ. ತಾಂತ್ರಿಕ ದೋಷ ಹಿನ್ನೆಲೆ ಬೆಂಗಳೂರು- ಮಾರಿಕುಪ್ಪಂ ಸ್ವರ್ಣ ಪ್ಯಾಸೆಂಜರ್ ರೈಲು ಮಾರ್ಗ ಮಧ್ಯೆ ನಿಂತಿತ್ತು. ಪ್ರಯಾಣಿಕರು ನಿಂತಿದ್ದ ರೈಲಿನಿಂದ ಇಳಿದು ಮತ್ತೊಂದು ಹಳಿ ದಾಟುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಅಲ್ಲಿದ್ದ ಜನರಲ್ಲಿ ಗಾಬರಿ ಹುಟ್ಟಿಸಿದೆ. ಆಗ ಚೆಲ್ಲಾಪಿಲ್ಲಿಯಾಗಿ ಜನರು ಓಡಿದ್ದಾರೆ. ಈ ವೇಳೆ, ಶಹಬಾಜ್ ಅಹಮದ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದು, ಹತ್ತಾರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈಲ್ವೇ ಅಧಿಕಾರಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಕಂಟ್ರೋನ್ಮೆಂಟ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.










