ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.
ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ‘ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ತಮಗೆ ಅನೇಕರು ಜೀವ ಬೆದರಿಕೆ ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಭದ್ರತೆ ನೀಡಬೇಕು ಎಂದು ಅವರು ಮುಂಬೈನ ವಿಶೇಷ ಪೊಲೀಸ್ ಆಯುಕ್ತ ದೇವೇನ್ ಭಾರ್ತಿಗೆ ಪತ್ರ ಬರೆದಿದ್ದಾರೆ.
‘ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಜನವರಿ 26ರಂದು ಚಿತ್ರ ತೆರೆಗೆ ಬರುತ್ತಿದೆ. ಜನವರಿ 30ಕ್ಕೆ ಗಾಂಧೀಜಿ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಅವರು ತೆರೆಗೆ ತರುತ್ತಿದ್ದಾರೆ. ಚಿನ್ಮಯ್ ಮಂಡ್ಲೇಕರ್ ಅವರು ಗೋಡ್ಸೆಯಾಗಿ ಹಾಗೂ ದೀಪಕ್ ಅಂತಾನಿ ಅವರು ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಗಳು ಟ್ರೇಲರ್ ನಲ್ಲಿ ಸಾಕಷ್ಟು ಗಮನ ಸೆಳೆದಿವೆ.
ಗೋಡ್ಸೆ ಗುಂಡು ಹಾರಿಸಿದ ನಂತರದಲ್ಲಿ ಮಹಾತ್ಮ ಗಾಂಧೀಜಿ ಬದುಕಿದ್ದರೆ ಏನಾಗುತ್ತಿತ್ತು ಎನ್ನುವ ಕಲ್ಪನೆಯೊಂದಿಗೆ ಈ ಸಿನಿಮಾ ಮೂಡಿ ಬಂದಿದೆ. ಸೂಕ್ಷ್ಮ ವಿಚಾರ ಆಗಿರುವುದರಿಂದ ಚಿತ್ರಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಈ ಚಿತ್ರದ ಪ್ರಮೋಷನ್ ವೇಳೆ ಅನೇಕರು ಬಂದು ಸಿನಿಮಾ ತಂಡಕ್ಕೆ ತೊಂದರೆ ಮಾಡಿದ ಬಗ್ಗೆ ವರದಿ ಆಗಿದೆ.










