ಬೆಂಗಳೂರು : ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಭ್ರಷ್ಟಾಚಾರ ಪೂರ್ವನಿಯೋಜಿತವಾಗಿ ಮಾಡಿದ ಕೃತ್ಯ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ 29 ಜನರನ್ನು ಅರೆಸ್ಟ್ ಮಾಡಲಾಗಿದೆ. ಆದರೆ ಯಾಕೆ ಇಲ್ಲಿಯವರೆಗೆ ಕೇಸ್ ದಾಖಲಿಸಿಲ್ಲ? ಇದಕ್ಕೆ ಗೃಹ ಸಚಿವರೇ ನೇರ ಹೊಣೆ ಹೊರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ, ಗುತ್ತಿಗೆದಾರರು ಇದನ್ನು ಭ್ರಷ್ಟ ಸರ್ಕಾರ ಎಂದಿದ್ದಾರೆ. ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿಎಸ್ಐ ನೇಮಕದಲ್ಲಿ ಅಕ್ರಮವಾಗಿದೆ. ಇದೆಲ್ಲಾ ಭ್ರಷ್ಟಾಚಾರ ಅಲ್ಲವೇ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು 10 ತಿಂಗಳಾಗಿದೆ. ಇನ್ನೂ ತನಿಖೆಗೆ ಆದೇಶಿಸಿಲ್ಲ. ಕ್ರಮ ಕೈಗೊಂಡಿಲ್ಲ. ರಾಜ್ಯಕ್ಕೂ ಈ ಬಗ್ಗೆ ಮಾಹಿತಿ ಕೇಳಿಲ್ಲ. 40 ಪರ್ಸೆಂಟ್ ಸರ್ಕಾರದ ವಿರುದ್ಧ ಕ್ರಮ ಆಗುತ್ತಿಲ್ಲ.
ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಫೆಬ್ರವರಿಯಲ್ಲಿ ಪತ್ರ ಬರೆದಿದ್ದಾರೆ. ಆದರೆ ಕ್ರಮ ಆಗಿಲ್ಲ. ಎಂಎಲ್ಸಿ ಸಂಕನೂರ್ ಸಹ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪರಿಷತ್ನಲ್ಲಿ ಸದಸ್ಯರಾದ ಶಶಿಲ್ ನಮೋಷಿ ಕೇಳಿದ ಪ್ರಶ್ನೆಗೆ ಸಹ ಕಲಾಪದಲ್ಲಿ ಉತ್ತರಿಸಲಾಗಿದ್ದು, ಗೃಹ ಸಚಿವರು ಪರೀಕ್ಷೆ ಸುಗಮವಾಗಿ ನಡೆದಿದೆ ಎಂದಿದ್ದಾರೆ. ಕಾಂಗ್ರೆಸ್ ಸದಸ್ಯ ಎಸ್.ರವಿ ದೂರಿನ ಸಂಬಂಧ ಕೇಳಿದ ಪ್ರಶ್ನೆಗೆ 5 ಸದಸ್ಯರು ದೂರು ಸಲ್ಲಿಸಿದ್ದಾರೆ. ಅಭ್ಯರ್ಥಿಗಳು ಅರ್ಹತೆ ಮೇಲೆ ಅಂಕ ಸಂಪಾದಿಸಿದ್ದು, ಅಕ್ರಮ ನಡೆದಿಲ್ಲ ಎಂದಿದ್ದಾರೆ. ಯು.ಬಿ. ವೆಂಕಟೇಶ್, ಅರವಿಂದ ಕುಮಾರ್ ಅರಳಿ ಸಹ ಅಕ್ರಮ ಬಗ್ಗೆ ಕೇಳಿದ ಪ್ರಶ್ನೆಗೂ ಅಕ್ರಮ ನಡೆದಿಲ್ಲ ಎಂಬ ಉತ್ತರ ನೀಡಲಾಗಿದೆ. ಗೃಹ ಸಚಿವರು ಮಂತ್ರಿಯಾಗಿ ಮುಂದುವರಿಯಲು ಲಾಯಕ್ಕಲ್ಲ. ಅವರನ್ನು ಕೂಡಲೇ ಡಿಸ್ಮಿಸ್ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಸರ್ಕಾರ ಇಂತಹ ಹಲವು ಹಗರಣದಲ್ಲಿ ಭಾಗಿಯಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಅವರು ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲಿ ಅಕ್ರಮದಲ್ಲಿ ಹೆಸರು ಬಂದಿದೆ. ಇಬ್ಬರ ಬಂಧನವಾಗಿದೆ. ಆದರೆ ಸಚಿವರನ್ನು ಬಿಡಲಾಗಿದೆ. ಅವರೇ ಇದಕ್ಕೆ ಉತ್ತರದಾಯಿತ್ವ ಅಗಿದ್ದಾರೆ. ಅವರ ಜವಾಬ್ದಾರಿ ಏನು?. ಇದರಿಂದ ಗೃಹ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಿಬ್ಬರನ್ನೂ ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ನಡೆದಿರುವ 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಅಧಿಕೃತ ಮುದ್ರೆ ಒತ್ತುವ ಕಾರ್ಯ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ನಿನ್ನೆ ಅಮಿತ್ ಶಾ, ಅರುಣ್ ಸಿಂಗ್ ಬಂದು ಹೋಗಿದ್ದಾರೆ. ಬೊಮ್ಮಾಯಿ ಸರ್ಕಾರಕ್ಕೆ ಶಬ್ಬಾಸ್ಗಿರಿ ಕೊಟ್ಟಿದ್ದಾರೆ. ಅರುಣ್ ಸಿಂಗ್ ಅವರು ಜನಸಾಮಾನ್ಯರ ಮುಖ್ಯಮಂತ್ರಿ ಎಂದಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ಭ್ರಷ್ಟಾಚಾರಕ್ಕೆ ಸಹಮತ ನೀಡಿದಂತಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಐಡಿ ತನಿಖೆ ನಡೆಯುತ್ತಿದೆ. ಸರ್ಕಾರ, ಮಂತ್ರಿಗಳು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದರಿಂದ ಸಿಐಡಿ ತನಿಖೆ ಸೂಕ್ತವಲ್ಲ. ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಬೇಕು. ಮೋದಿ ಮುಂದೆಯಾದರೂ ನಾಟಕವಾಡುವುದನ್ನು ಬಿಟ್ಟು ತಮ್ಮ ಮಾತಿಗೆ ಬೆಲೆ ಬರಬೇಕೆಂದರೆ ಕೂಡಲೇ ತನಿಖೆಗೆ ಸೂಚಿಸಬೇಕು ಎಂದು ಹೇಳಿದರು.










