ಚಾರ್ಮಾಡಿ ಘಾಟ್ ರಸ್ತೆಯನ್ನ ಚಥುಷ್ಟತ ರಸ್ತೆಯನ್ನಾಗಿ ಪರಿವರ್ತಿಸಲು ಚಿಂತನೆ : ಶೋಭಾ ಕರಂದ್ಲಾಜೆ.

194
firstsuddi

ಕೊಟ್ಟಿಗೆಹಾರ : ‘ಚಾರ್ಮಾಡಿ ಘಾಟ್ ರಸ್ತೆಯನ್ನು ಚಥುಷ್ಟತ ರಸ್ತೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ. ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೊಟ್ಟಿಗೆಹಾರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ’ಚಾರ್ಮಾಡಿ ಘಾಟಿ ಪ್ರತಿವರ್ಷ ಮಳೆಗಾಲದಲ್ಲಿ ಮಳೆಗೆ ಮಣ್ಣು ಕುಸಿಯುವುದು ಹಾಗೂ ಗುಡ್ಡ ಕುಸಿಯುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಚಾರ್ಮಾಡಿ ಚಥುಷ್ಟತ ರಸ್ತೆಯನ್ನಾಗಿ ಮಾಡಲು ಅಪೇಕ್ಷೆಯಿದೆ. ಇದಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆಯೂ ಸದ್ಯದಲ್ಲೇ ಬರಬಹುದು. ಅರಣ್ಯ ಇಲಾಖೆಯ ಜೊತೆ ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಿ ಚಾರ್ಮಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಿ ಚಥುಷ್ಟತ ರಸ್ತೆ ಮಾಡಲು ಪ್ರಯತ್ನ ನಡೆದಿದೆ. ಮೂಲಭೂತ ಸೌಲಭ್ಯಕ್ಕೆ ಯಾವುದೇ ಅರಣ್ಯದ ಕಾಯ್ದೆ ಅಡಚಣೆಯಾಗದಂತೆ ಸಡಿಲಗೊಳಿಸಲು ಕೇಂದ್ರ ಪರಿಸರ ಮಂತ್ರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಕೊಟ್ಟಿಗೆಹಾರದಿಂದ ಮೂಡಿಗೆರೆ ಬೇಲೂರು ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು ಶೀಘ್ರದಲ್ಲಿ ಸಂಚಾರಕ್ಕೆ ಮುಕ್ತ ಗೊಳಿಸಲಾಗುತ್ತದೆ ಎಂದರು.

ಬಳಿಕ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಮತಾಂತರ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿರುವ ಎಲ್ಲಾ ಕಾನೂನುಗಳನ್ನು ಬಲವಾಗಿ ಜಾರಿಗೊಳಿಸಲು ನಮ್ಮ ಅಪೇಕ್ಷೆಯಿದೆ. ಕಾಂಗ್ರೆಸ್ ಸರ್ಕಾರ ಇದನ್ನು ವಿರೋಧಿಸುತ್ತಿದೆ. ಬೇರೆ ಧರ್ಮದವರನ್ನು ಮತಕ್ಕಾಗಿ ಓಲೈಕೆ ಮಾಡಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಕುರ್ಚಿ ಗಟ್ಟಿ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮತಾಂತರ ಎನ್ನುವುದು ಸಮಾಜಕ್ಕೆ ಮಾರಕವಾಗಿದೆ. ಅನಾರೋಗ್ಯ, ಬಡತನ, ಪ್ರೀತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯವಸ್ಥಿತ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಇದು ರಾಜ್ಯದಲ್ಲಿಯೂ ನಡೆಯುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಸಾವಿರಾರು ಹೆಣ್ಣು ಮಕ್ಕಳು ಮತಾಂತರ ಆಗುತ್ತಿದ್ದಾರೆ. ಅವರಿಗೆ ನೆಲೆ ಇಲ್ಲದ ಪರಿಸ್ಥಿತಿಯನ್ನು ನಾವು ಹಲವಾರು ಪ್ರದೇಶದಲ್ಲಿ ನೋಡುತ್ತಿದ್ದೇವೆ. ಇಂತಹ ಕೆಟ್ಟ ವ್ಯವಸ್ಥೆಗಳು ಸಮಾಜದಲ್ಲಿ ಇರಬಾರದು. ಅದಕ್ಕಾಗಿ ಇದಕ್ಕೆ ನಿಷೇಧ ಮಾಡಬೇಕು ಎಂಬ ನಮ್ಮ ಪ್ರಯತ್ನ ನಡೆಯುತ್ತಿದೆ. ಯಾವುದೇ ಧರ್ಮದವರು ಅದೇ ಧರ್ಮದಲ್ಲಿ ಮುಂದುವರೆದರೆ ಯಾರ ಅಭ್ಯಂತರವೂ ಇಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ.ಎಂ.ಭರತ್, ಟಿ.ಎಂ.ಗಜೇಂದ್ರ, ನರೇಂದ್ರಗೌಡ, ಪರೀಕ್ಷಿತ್ ಜಾವಳಿ ಇದ್ದರು.