ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ ಚಾಕುವಿನಿಂದ ಇರಿದ ಆರೋಪಿ!

86
firstsuddi

ತಿರುವನಂತಪುರಂ : ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಮೇಲೆ ಪ್ರಕರಣದ ಆರೋಪಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ಇಂದು ನಡೆದಿದೆ. ವಂದನಾ ದಾಸ್ (23) ಮೃತ ವೈದ್ಯೆ. ನೆಡುಂಬನಾದ ಶಾಲಾ ಶಿಕ್ಷಕ ಸಂದೀಪ್ (42) ಕೊಲೆಗೈದ ಆರೋಪಿ.

ಆರೋಪಿ ಮದ್ಯ ಸೇವನೆ ಮಾಡಿ ನೆರೆಹೊರೆಯವರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಗಲಾಟೆ ಮಾಡುತ್ತಿದ್ದ ಮಾಹಿತಿ ಬಂದ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ಗಲಾಟೆ ವೇಳೆ ಗಾಯಗೊಂಡಿದ್ದ ಸಂದೀಪ್ ನನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಇಂದು ಕೊಟ್ಟಾರಕ್ಕರ ಸರ್ಕಾರಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು.

ಸಂದೀಪ್ ಗೆ ವೈದ್ಯೆ ವಂದನಾ ದಾಸ್ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಸರ್ಜಿಕಲ್ ಬ್ಲೇಡ್, ಚಿಕಿತ್ಸೆಗೆ ಬಳಸುವ ಸಲಕರಣೆಗಳಿಂದ ದಾಳಿ ಮಾಡಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರಿಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ಓರ್ವ ವೈದ್ಯ, ಓರ್ವ ಪೊಲೀಸ್ ಸೇರಿದಂತೆ ಐವರಿಗೆ ಚೂರಿ ಇರಿತವಾಗಿದೆ.

ವೈದ್ಯೆಯ ಮೇಲೆ ದಾಳಿ ನಡೆದಾಗ ಆಸ್ಪತ್ರೆಯಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಇದ್ದರು. ಈ ವೇಳೆಯೇ ಘಟನೆ ನಡೆದಿರುವುದು ಅಚ್ಚರಿ ಉಂಟು ಮಾಡಿದೆ. ಸುದ್ದಿ ಹರಿದಾಡುತ್ತಿದ್ದಂತೆ ನೂರಾರು ವೈದ್ಯರು ಆಸ್ಪತ್ರೆಗೆ ಧಾವಿಸಿ ಮುಷ್ಕರ ನಡೆಸುತ್ತಿದ್ದಾರೆ.