ಚಿಕ್ಕಬಳ್ಳಾಪುರ : ಜಿಲ್ಲೆಯ ಹಲವೆಡೆ ಲಘು ಭೂಕಂಪ ಸಂಭವಿಸಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಎರಡು ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 2.9 ರಿಂದ 3 ರಷ್ಟು ತೀವ್ರತೆ ದಾಖಲಾಗಿದೆ.
ತಾಲೂಕಿನ ಶೆಟ್ಟಿಗೆರೆ, ಬೈಯಪ್ಪನಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಸದ್ದು ಕೇಳಿ ಬಂದಿದೆ. ಈ ಬಾರಿ ಮಳೆ ಜಾಸ್ತಿಯಾಗಿದ್ದು, ಅಂತರ್ಜಲ ಉಕ್ಕುತ್ತಿದೆ. ಹಾಗಾಗಿ ವಿಫಲ ಕೊಳವೆ ಬಾವಿಗಳ ಮೂಲಕ ಅಂತರ್ಜಲ ಮರುಪೂರಣದಿಂದ ಏರ್ ಬ್ಲಾಸ್ಟ್ ಆಗಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ ಸ್ಪಷ್ಟ ಪಡಿಸಿದೆ.
ಸಾರ್ವಜನಿಕರು ಭಯಭೀತರಾಗದಂತೆ ಜಿಲ್ಲಾಧಿಕಾರಿ ಲತಾ ಆರ್ ತಿಳಿಸಿದ್ದಾರೆ.










