ಚಿಕ್ಕಮಗಳೂರು:ಶ್ರೀ ಗುರು ದತ್ತ ಚೈತನ್ಯ ಶೋಡಶಿ ಸೇವಾಶ್ರಮದಲ್ಲಿ : ಒಂದು ಲಕ್ಷ ಸಂಖ್ಯೆಯ ಶ್ರೀ ದತ್ತಾತ್ರೇಯ ಮೂಲ ಮಂತ್ರ ಹೋಮ.

240

ಚಿಕ್ಕಮಗಳೂರು : ನೂರಾರು ಭಕ್ತರ ನಡುವೆ ಒಂದು ಲಕ್ಷ ಸಂಖ್ಯೆಯ ಶ್ರೀ ದತ್ತಾತ್ರೇಯ ಮೂಲ ಮಂತ್ರ ಹೋಮದೊಂದಿಗೆ ನಗರ ಹೊರವಲಯದ ಶ್ರೀ ಗುರು ದತ್ತ ಚೈತನ್ಯ ಶೋಡಶಿ ಸೇವಾಶ್ರಮದಲ್ಲಿ ಕಳೆದ 3 ದಿನಗಳ ಕಾಲ ನಡೆದ ದತ್ತಮಾಯಿ ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.
ಉತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ದತ್ತಾತ್ರೇಯ ವಿಗ್ರಹ ಮತ್ತು ಪಾದುಕೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆದವು. ನಂತರ 30 ಜನ ಋತ್ವಿಕರ ತಂಡ ಒಂದು ಲಕ್ಷ ಬಿಲ್ವ ಫಲದಿಂದ ಶ್ರೀ ದತ್ತಾತ್ರೇಯ ಮೂಲ ಮಂತ್ರ ಹೋಮವನ್ನು ಧಾರ್ಮಿಕ ವಿಧಿವಿಧಾನಗಳ ನಡುವೆ ನಡೆಸಿತು.
ಮಧ್ಯಾಹ್ನ ಹೋಮದ ಪೂರ್ಣಾಹುತಿಯ ನಂತರ ವೇದಘೋಷದ ನಡುವೆ ಶ್ರೀ ದತ್ತಾತ್ರೇಯ ವಿಗ್ರಹ ಮತ್ತು ಪಾದುಕೆಗಳಿಗೆ ಪಲ್ಲಕ್ಕಿ ಉತ್ಸವ, ಉಯ್ಯಾಲೋತ್ಸವ, ಪ್ರಾಕಾರೋತ್ಸವ ಜರುಗಿತು.
ಇದೇ ವೇಳೆ ಭಕ್ತರಿಂದ ನಾಮ ಸಂಕೀರ್ತನೆ, ಸ್ತ್ರೋತ್ರ ಪಠಣ, ಸಾಮೂಹಿಕ ಭಜನೆ ನಡೆದವು, ಮಹಾ ಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು, ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದತ್ತ ಪಾದುಕೆಗಳ ದರ್ಶನ ಪಡೆದರು.
ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ಆಶ್ರಮದಲ್ಲಿ ರುದ್ರಾಭಿಷೇಕ, ಅಷ್ಟದ್ರವ್ಯ ಗಣಪತಿ ಹೋಮ, ಚಂಡಿಕಾ ಹೋಮ, ರುದ್ರ ಹೋಮ, ಕಾಲಸರ್ಪ ಹೋಮ, ಭಿಕ್ಷಾ ಸೇವೆ, ಅಷ್ಟಾವದಾನ ಸೇವೆ ನಡೆದವು.