ಚಿಕ್ಕಮಗಳೂರು : ಅಂಚೆ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಸಾರ್ವಜನಿಕರು ಬಳಸಿಕೊಂಡರೆ ಅದು ಅವರ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತವೆ : ಎಸ್.ರಾಜೇಂದ್ರ ಕುಮಾರ್.

528
firstsuddi

ಚಿಕ್ಕಮಗಳೂರು : ಉಳಿತಾಯ ಯೋಜನೆ ಸೇರಿದಂತೆ ಅಂಚೆ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಸಾರ್ವಜನಿಕರು ಬಳಸಿಕೊಂಡಲ್ಲಿ ಅವು ಅವರ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತವೆ ಎಂದು ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಹೇಳಿದರು.
ನಗರದ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಶನಿವಾರ ನಡೆದ ದಕ್ಷಿಣ ಕರ್ನಾಟಕ ವಲಯ ಮಟ್ಟದ ಅಂಚೆ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ಅಂಚೆ ಇಲಾಖೆಯೆಂದರೆ ಕೇವಲ ಪತ್ರಗಳನ್ನು ತಲುಪಿಸುವ ಇಲಾಖೆ ಎಂಬ ಕಲ್ಪನೆಯಿತ್ತು ಅದನ್ನು ಬದಲಾಯಿಸಿರುವ ಅಂಚೆ ಇಲಾಖೆ ಇದೀಗ ಆರ್ಥಿಕ ಸೇವೆ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಜನರಿಗೆ ಒದಗಿಸುತ್ತಿದೆ ಎಂದರು.
ಅಂಚೆ ಇಲಾಖೆ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಿದೆ ಅದರ ಮೂಲಕ ಬ್ಯಾಂಕಿನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ, ಸರ್ಕಾರದ ವಿವಿಧ ಯೋಜನೆಗಳ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಆಧಾರ್ ಸೇವೆ ಹಿಂದೆ ಜಿಲ್ಲಾ ಮಟ್ಟದಲ್ಲಿ ಮಾತ್ರ ದೊರೆಯುತ್ತಿತ್ತು, ಅಂಚೆ ಇಲಾಖೆ ಇದೀಗ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಸೇವೆಯನ್ನು ಎಲ್ಲಾ ತಾಲ್ಲೂಕುಗಳ ಅಂಚೆ ಕಛೇರಿಯಲ್ಲಿ ಒದಗಿಸುತ್ತಿದೆ ಎಂದು ಹೇಳಿದರು.
ಮೊಬೈಲ್ ಎಟಿಎಂ ಆರಂಭಿಸಿದೆ, ವೃದ್ದಾಪ್ಯ ವೇತನ ಸೇರಿದಂತೆ ಪಿಂಚಣಿ ಪಡೆಯುವವರಿಗೆ ಇಲಾಖೆಯ ಕಛೇರಿಗೆ ಬರಲಾಗದಿದ್ದಲ್ಲಿ ಅವರ ಮನೆ ಬಾಗಿಲಿಗೇ ತಲುಪಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಚೆ ಅಧೀಕ್ಷಕ ಜಿ.ಸಿ.ಶ್ರೀನಿವಾಸ್ ಸಾರ್ವಜನಿಕರ ದೂರುಗಳನ್ನು ಆಲಿಸುವುದು ಮತ್ತು ಅವರ ಸಲಹೆಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಜಿಲ್ಲೆಗಳಲ್ಲೂ ಅಂಚೆ ಅದಾಲತ್ ನಡೆಸುತ್ತಿದೆ ಎಂದು ತಿಳಿಸಿದರು.
ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಅದಾಲತ್‍ನಲ್ಲಿ ಗ್ರಾಹಕರ ದೂರುಗಳ ಪರಿಶೀಲನೆ ನಡೆಸುವುದರ ಜೊತೆಗೆ ಸಾರ್ವಜನಿಕರೊಂದಿಗೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಸಿದರು.
ರಾಜ್ಯದ ಅಂಚೆ ಕಛೇರಿಗಳಲ್ಲಿ ಕನ್ನಡದ ನಾಮಫಲಕಕ್ಕೆ ಮೊದಲ ಸ್ಥಾನ ನೀಡಬೇಕು ನಂತರದ ಸ್ಥಾನವನ್ನು ಹಿಂದಿ ಮತ್ತು ಆಂಗ್ಲ ಭಾಷೆಗೆ ನೀಡಬೇಕು, ಅಂಚೆ ಕಛೇರಿಗಳಲ್ಲಿ ದೊರೆಯುವ ಸೇವೆಗಳ ವಿವರಗಳನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು ಎಂಬ ಸಲಹೆ ಇದೇ ವೇಳೆ ಕೇಳಿ ಬಂತು.
ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಸಹಾಯಕ ನಿರ್ದೇಶಕ ರಾಜಶೇಖರ್ ಭಟ್, ಸಹಾಯಕ ಅಧೀಕ್ಷಕ ಚಂದ್ರಶೇಖರ್, ಕಛೇರಿ ಸಹಾಯಕ ವಿಶ್ವೇಶ್ವರ ಪ್ರಸಾದ್ ಉಪಸ್ಥಿತರಿದ್ದರು.