ಚಿಕ್ಕಮಗಳೂರು : ಸ್ನಾತಕೋತ್ತರ ಕೇಂದ್ರದವರು ಒತ್ತುವರಿ ಮಾಡಿರುವ ತಮ್ಮ ಜಮೀನಿಗೆ ತೆರಳುವ ರಸ್ತೆಯನ್ನು ತೆರವುಗೊಳಿಸುವಂತೆ ತಾಲ್ಲೂಕಿನ ಕದ್ರಿಮಿದ್ರಿ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಅವರನ್ನು ಶನಿವಾರ ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು.
ಕದ್ರಿಮಿದ್ರಿಯ ಸರ್ವೆ ನಂ.273 ರಲ್ಲಿ 40 ಅಡಿಯ ರಸ್ತೆಯಿದ್ದು, ತಲತಲಾಂತರದಿಂದ ನಾವುಗಳು ನಮ್ಮ ಜಮೀನಿಗೆ ಮತ್ತು ಆ ಭಾಗದಲ್ಲಿರುವ ಗ್ರಾಮ ದೇವತೆ ದೊಡ್ಡಮ್ಮನವರ ದೇವಾಲಯಕ್ಕೆ ಆ ರಸ್ತೆಯ ಮೂಲಕ ತೆರಳುತ್ತಿದ್ದೇವೆ ಎಂದು ತಿಳಿಸಿದರು.
ಅದೇ ಸರ್ವೆ ನಂಬರಿನಲ್ಲಿ ನಿರ್ಮಾಣವಾಗುತ್ತಿರುವ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರದವರು ಇದೀಗ ಆ ರಸ್ತೆಯನ್ನು ಒತ್ತುವರಿ ಮಾಡಿ ಬೇಲಿ ನಿರ್ಮಿಸಲು ಮುಂದಾಗಿದ್ದು, ಅವರು ಬೇಲಿ ನಿರ್ಮಿಸಿದಲ್ಲಿ ತಮಗೆ ದೇವಾಲಯಕ್ಕೆ ಮತ್ತು ತಮ್ಮ ಜಮೀನುಗಳಿಗೆ ಓಡಾಡಲು ರಸ್ತೆಯಿಲ್ಲದಂತಾಗುತ್ತದೆ ಎಂದು ಅಳಲು ತೋಡಿಕೊಂಡರು.
ಗ್ರಾಮಸ್ಥರ ನೂರಾರು ಎಕರೆ ಜಮೀನಿಗೆ ತೆರಳಲು ಅದೊಂದೇ ರಸ್ತೆಯಿದ್ದು ಅದನ್ನು ಬಿಟ್ಟರೆ ಯಾವುದೇ ಪರ್ಯಾಯ ರಸ್ತೆಯಿಲ್ಲ ಎಂದು ಜಿಲ್ಲಾಧಿಕಾರಿಗೆ ಗ್ರಾಮ ನಕಾಶೆಯನ್ನು ತೋರಿಸಿ ವಿವರಿಸಿದ ಗ್ರಾಮಸ್ಥರು ರಸ್ತೆ ಒತ್ತುವರಿಯನ್ನು ತೆರವುಗೊಳಿಸದಿದ್ದಲ್ಲಿ ನಾವುಗಳು ಓಡಾಡಲು ಸಾಧ್ಯವಾಗದೇ ನಮ್ಮ ಜಮೀನುಗಳು ಹಾಳು ಬೀಳುತ್ತವೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ರಸ್ತೆ ಒತ್ತುವರಿಯನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿದರು. ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ತಹಶೀಲ್ದಾರ್ ಅವರು ವರ್ಗಾವಣೆಗೊಂಡಿದ್ದು, ಸೋಮವಾರ ಅಧಿಕಾರ ಸ್ವೀಕರಿಸುವ ನೂತನ ತಹಶೀಲ್ದಾರ್ ಅವರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.
ಕಾಮಗಾರಿ ಸ್ಥಳದಲ್ಲಿದ್ದ ಇಂಜೀನಿಯರ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ ಜಿಲ್ಲಾಧಿಕಾರಿ ತಹಶೀಲ್ದಾರ್ ಅವರು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ ಮುಂದಿನ ಸೂಚನೆ ನೀಡುವವರೆಗೂ ಬೇಲಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಆದೇಶಿಸಿದರು.
ಮೂಕ್ತಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಜಗನ್ನಾಥ್, ಗ್ರಾಮಸ್ಥರಾದ ಪ್ರಕಾಶ್, ಪುರುಷೋತ್ತಮ್, ಲೋಕೇಶ್, ಕೃಷ್ಣೇಗೌಡ, ರಘು, ಪರಮೇಶ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಒತ್ತುವರಿ ಮಾಡಿರುವ ರಸ್ತೆಯನ್ನು ತೆರವುಗೊಳಿಸುವಂತೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ...










