ಚಿಕ್ಕಮಗಳೂರು : ಜಾನಪದದ ನಿಜವಾದ ವಾರಸುದಾರರು ಮಹಿಳೆಯರು ಮತ್ತು ರೈತರು ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಡಾ|| ಶ್ರೀಕಂಠ ಕೂಡಿಗೆ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಜಾನಪದ ಅರಿವು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಜಾನಪದವನ್ನು ಮಹಿಳೆಯರು ಮತ್ತು ರೈತರು ಸಂರಕ್ಷಿಸಿದಷ್ಟು ಬೇರಾರೂ ರಕ್ಷಿಸಿಲ್ಲ , ಆಧುನಿಕತೆಯ ಭರಾಟೆ ಮತ್ತು ಹಲವು ಸಂಕಷ್ಟಗಳ ನಡುವೆಯೂ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಮಹಿಳೆಯರು ಮತ್ತು ರೈತರು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿರುವುದರಿಂದಾಗಿ ಅದು ಇಂದಿಗೂ ಉಳಿದಿದೆ, ಹಾಗಾಗಿ ಜಾನಪದದ ಮೂಲಪುರುಷರು ಪುರುಷರಲ್ಲ ಅವರು ಮಹಿಳೆಯರು ಎಂದರು.
ನಮ್ಮ ಜಾನಪದರು ಅವಿವೇಕಿಗಳಲ್ಲ ಅತ್ಯಂತ ವಿವೇಕಿಗಳಾಗಿದ್ದ ಅವರು ಯಾವುದೇ ಯೂನಿವರ್ಸಿಟಿಗಳಲ್ಲಿ ಕಲಿತವರಲ್ಲ ಅವರು ಅನಕ್ಷರಸ್ಥರು, ಜಾನಪದ ಕಲ್ಪನೆಯಿಂದ ಹುಟ್ಟಿದ್ದಲ್ಲ, ಅದು ಜಾನಪದರ ಅನುಭವದ ಮೂಸೆಯಿಂದ ಬಂದದ್ದು ಹಾಗಾಗಿ ಅದು ಜನಸಮುದಾಯದ ಭಗವದ್ಗೀತೆ ಎಂದು ತಿಳಿಸಿದರು.
ಕನ್ನಡದ ನವೋದಯ ಕವಿಗಳಿಗೆ ಸ್ಪೂರ್ತಿಯಾಗಿರುವುದು ಜಾನಪದ, ಬೇಂದ್ರೆ, ಪುತಿನ, ಕೆ.ಎಸ್.ನರಸಿಂಹಸ್ವಾಮಿ ಸೇರಿದಂತೆ ಅನೇಕ ಕವಿಗಳು ರಚಿಸಿರುವ ಗೀತೆಗಳಲ್ಲಿ ಜಾನಪದವನ್ನು ಕಾಣಬಹುದು, ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರೂ ಜಾನಪದದಿಂದ ಪ್ರಭಾವಿತರಾದವರು ಎಂದರು.
ಜಾನಪದವನ್ನು ನಾವು ಆಧುನಿಕ ಜ್ಞಾನಕ್ಕೆ ವಿರುದ್ದವಾದುದು ಎಂದು ತಿಳಿದುಕೊಂಡಿದ್ದೇವೆ ಆದರೆ ನಿಜವಾಗಿ ನಮ್ಮ ಇಂದಿನ ಊಟ, ಉಪಹಾರ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಎಲ್ಲದರಲ್ಲೂ ಜಾನಪದ ಅಡಕವಾಗಿದೆ ಎಂದು ಹೇಳಿದರು.
ಜಿಲ್ಲೆಯ ಜಾನಪದ ಪ್ರಾಕಾರಗಳು ವಿಷಯ ಕುರಿತು ಉಪನ್ಯಾಸ ನೀಡಿದ ಐಡಿಎಸ್‍ಜಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|| ಹೆಚ್.ಎಂ.ಮಹೇಶ್ ಜಿಲ್ಲೆಯಲ್ಲಿರುವ ಜಾನಪದ ಕಲೆಗಳು ಇತಿಹಾಸ ಸೇರಬಾರದು ಅವು ಪುನರುಜ್ಜೀವನಗೊಂಡು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದ ಕಲೆ ಮತ್ತು ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಎಸ್.ಜಿ.ಸಾವಿತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಸಾಹಿತಿ ಚಟ್ನಳ್ಳಿ ಮಹೇಶ್ ಮತ್ತು ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ|| ಎಸ್.ಹೆಚ್.ಸತ್ಯನಾರಾಯಣ ಉಪನ್ಯಾಸ ನೀಡಿದರು.
ಇದೇ ವೇಳೆ ಬಿಳಗಲಿ ನಾಗರಾಜ್ ಅವರಿಂದ ಕೊಳಲು ವಾದನ, ಗಾಯಕರಾದ ಜಿ.ಬಿ.ಸುರೇಶ್ ಮತ್ತು ಜ್ಯೋತಿ ವಿನೀತ್ ಕುಮಾರ್ ಅವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.
ಆಶಾಕಿರಣ ಅಂಧ ಮಕ್ಕಳ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಉಪಸ್ಥಿತರಿದ್ದರು, ಉಪನ್ಯಾಸಕರಾದ ಎಂ.ಆರ್.ನಾಗರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು, ಜಿ.ಬಿ.ವಿರೂಪಾಕ್ಷ ಸ್ವಾಗತಿಸಿದರು, ದಯಾನಂದ್ ವಂದಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಜಾನಪದವನ್ನು ಮಹಿಳೆಯರು ಮತ್ತು ರೈತರು ಸಂರಕ್ಷಿಸಿದಷ್ಟು ಬೇರಾರೂ ರಕ್ಷಿಸಿಲ್ಲ : ಡಾ|| ಶ್ರೀಕಂಠ...










