ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಸಚಿವ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಿದ್ದಾರೆ.
ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಈಶ್ವರಪ್ಪ, ನಾನು ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿ.
ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪ-ಮುಖ್ಯಮಂತ್ರಿಯವರಿಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಲಿಸ್ಟ್ ಬಿಡುಗಡೆ ಮುನ್ನವೇ ಈಶ್ವರಪ್ಪ ನಡೆ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಹಾಲಾಡಿ ಶ್ರೀನಿವಾಸ ಶೆಟ್ಟಿ, ದಾವಣಗೆರೆ ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ರಾಜ್ಯ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.










