ಬೆಂಗಳೂರು: ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಠಾಣಾ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಕೊಡಿಗೆಹಳ್ಳಿ ನಿವಾಸಿಗಳಾದ ವಿನಾಯಕ್, ರಾಹುಲ್ ಹಾಗೂ ಪವನ್ ಎಂಬುವರು ತಮ್ಮ ಮೇಲೆ ಹಲ್ಲೆ ನಡೆದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರು ಯುವಕರು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಲು ಎಂ.ಎಸ್.ಪಾಳ್ಯ ಕಡೆಗೆ ಒಂದೇ ಕಾರಿನಲ್ಲಿ ಬುಧವಾರ ಮಧ್ಯಾಹ್ನ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಾವುಟ ಹಿಡಿದುಕೊಂಡು, ಜೈ ಶ್ರೀರಾಮ್ ಎಂದು ಜೈಕಾರ ಕೂಗಿದ್ದರು. ಇದನ್ನು ಗಮನಿಸಿದ ಇಬ್ಬರು ಯುವಕರು ಬೈಕ್ನಲ್ಲಿ ಫಾಲೋ ಮಾಡಿಕೊಂಡು ಬಂದು ವಾಹನ ಅಡ್ಡಗಟ್ಟಿ ಜೈ ಶ್ರೀರಾಮ್ ಕೂಗದಂತೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೇ, ಯುವಕರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಕಾರಿನಲ್ಲಿದ್ದ ಯುವಕನೊಬ್ಬ ಇದನ್ನು ಪ್ರಶ್ನಿಸಿ ಕಾರಿನಿಂದ ಕೆಳಗಿಳಿಯುತ್ತಿದಂತೆ ಕ್ಷಣಾರ್ಧದಲ್ಲೇ ಯುವಕರು ಎಸ್ಕೇಪ್ ಆಗಿದ್ದಾರೆ. ಬಳಿಕ ಮತ್ತೆ ಕಾರನ್ನು ಫಾಲೋ ಮಾಡಿದ ಇಬ್ಬರು ಯುವಕರು ಜೊತೆಗೆ ಮತ್ತೆ ಮೂವರನ್ನು ಒಗ್ಗೂಡಿಸಿಕೊಂಡು ಬಂದು ದೊಣ್ಣೆಯಿಂದ ಹಲ್ಲೆ ನಡೆಸಿ, ಎಸ್ಕೇಪ್ ಆಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಇಬ್ಬರು ಆರೋಪಿಗಳು ಹಾಗೂ ಇನ್ನಿಬ್ಬರು ಅಪ್ರಾಪ್ತರ ಸಹಿತ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಇನ್ನೂ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಭೇಟಿ ನೀಡಿದ್ದು, ನಾಲ್ವರು ಆರೋಪಿಗಳ ವಿಚಾರಣೆ ಮಾಡಿದ್ದಾರೆ. ಯಾವುದೇ ಪ್ರೀಪ್ಲ್ಯಾನ್ ಕೂಡ ಇರಲಿಲ್ಲ. ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬೈಕ್ನಲ್ಲಿ ಬರುತ್ತಿದ್ದೆವು. ಎಂಎಸ್ ಪಾಳ್ಯ ರಸ್ತೆಯಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕಾರಿನಲ್ಲಿ 3-4 ಯುವಕರು ಬಂದು ನಮ್ಮ ಬಳಿ ನಿಲ್ಲಿಸಿದರು. ಆಗ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತಾ ಜೋರಾಗಿ ಕಿರುಚಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಕೂಗಿ ಅಂತಾ ಹೇಳಿದರು. ಅದಕ್ಕೆ ನಾವು ನೀವೇ ಅಲ್ಲಾಹು ಅಕ್ಬರ್ ಅಂತಾ ಕೂಗಿ ಎಂದೆವು. ನಾವು ಯಾಕೆ ಕೂಗಬೇಕು ಅಂತಾ ಮಾತಿಗೆ ಮಾತು ಬೆಳೆಯಿತು. ಆಗ ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ ಸರ್. ಯಾವುದೇ ಬೇರೆ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಹಳೇ ಕೇಸ್ ಇರುವ ಬಗ್ಗೆ ಮಾಹಿತಿ ಇಲ್ಲ.
ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಒಳಪಡಿಸಿದ್ದು, ನಾಲ್ವರ ಪೈಕಿ ಇಬ್ಬರು ಅಪ್ರಾಪ್ತರು ಮದ್ಯ ಸೇವಿಸಿರುವುದು ದೃಢವಾಗಿದೆ. ಗಾಂಜಾ ಸೇವನೆ ಬಗ್ಗೆ ಯಾವುದೇ ವರದಿ ಬಂದಿಲ್ಲ. ಇನ್ನು ವಿದ್ಯಾರಣ್ಯಪುರ ಪೊಲೀಸ್ ಠಾಣೆ ಎದುರು ಬಿಗಿ ಭದ್ರತೆ ಒದಗಿಸಲಾಗಿದ್ದು, ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿಗಳು ಸೇರಿ 30ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.










