ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಚಿಂತನೆ ನಡೆಸಿರುವ ಹಿನ್ನೆಲೆ ಇಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿಗೊಳಿಸಿ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶಿಸಿದ್ದಾರೆ.
ಟಿಪ್ಪು ವಕ್ಫ್ ಎಸ್ಟೇಟ್‌ನಿಂದ ಟಿಪ್ಪು ಜಯಂತಿ ನಡೆಸಲು ಚಿಂತನೆ ನಡೆಸಲಾಗಿದೆ. ಮೈಸೂರು ಸೇರಿದಂತೆ ಹಲವೆಡೆಯಿಂದ ಜನ ಆಗಮಿಸುವ ಸಾಧ್ಯತೆಯಿದ್ದು, ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಗಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಗ್ಗೆ 6 ರಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ರಾತ್ರಿ 11 ಗಂಟೆವರೆಗೆ ಇರಲಿದೆ. ಯಾವುದೇ ಮೆರವಣಿಗೆ, ಪ್ರತಿಭಟನೆ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ, ಯಾವುದೇ ಘೋಷಣೆ ಕೂಗದಂತೆ, ಪ್ರಚೋದನಕಾರಿ ಚಿತ್ರವಿರುವ ಟೀ ಶರ್ಟ್ ಧರಿಸದಂತೆ, ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ, ಪಟಾಕಿ ಸಿಡಿಸದಂತೆ ಆದೇಶದಲ್ಲಿ ತಿಳಿಸಲಾಗಿದೆ.
ಪಟ್ಟಣದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಹೊರ ಜಿಲ್ಲೆಗಳಿಂದ ಬರುವ ಸಾರ್ವಜನಿಕರು ಹಾಗೂ ಪ್ರವಾಸಿಗರ ಮೇಲೆ ನಿಗಾವಹಿಸಲಾಗುತ್ತಿದೆ.










