ಬೆಂಗಳೂರು : ಕಾಲೇಜಿನಿಂದ ಡಿಬಾರ್ ಮಾಡಿದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯ ಅಮರಜ್ಯೋತಿ ಲೇಔಟ್ ನಲ್ಲಿ ನಡೆದಿದೆ.
ಮುಳಬಾಗಿಲು ಮೂಲದ ಭವ್ಯ(21) ಮೃತ ದುರ್ದೈವಿ. ತಾನು ವಾಸವಿದ್ದ ಖಾಸಗಿ ಪಿ.ಜಿ ಕಟ್ಟಡದ 5 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಭವ್ಯ ಮೊದಲ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಆದರೆ ನಿನ್ನೆ ನಡೆದ ಎಕ್ಸಾಂನಲ್ಲಿ ಕಾಪಿ ಮಾಡುತ್ತಿದ್ದಾಳೆಂದು ಆರೋಪಿಸಿ ಡಿಬಾರ್ ಮಾಡಿದ್ದರು.
ಇದರಿಂದ ಮನನೊಂದ ಭವ್ಯಾ ನಿನ್ನೆ ಸಂಜೆ ತನ್ನ ಸಹೋದರಿ ದಿವ್ಯಾಗೆ ಕರೆ ಮಾಡಿ ನನ್ನನ್ನ ಕಾಲೇಜ್ ನಿಂದ ಡಿಬಾರ್ ಮಾಡಿದ್ದಾರೆ, ಹಾಗಾಗಿ ನಾನು ಬದುಕುವುದಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ದಿವ್ಯಾ ತಕ್ಷಣ ಈ ವಿಚಾರವನ್ನ ತಂದೆಗೆ ತಿಳಿಸಿದ್ದಾಳೆ.
ಆದರೆ ಪೋಷಕರು ಬೆಂಗಳೂರು ತಲುಪುವಷ್ಟರಲ್ಲೇ ಭವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.










