ಹಾಸನ : ತಂದೆ ಇಟ್ಟಿದ್ದ 13,20,000 ರೂ. ಹಣ ಮಗನೇ ಕದ್ದು ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯಗಚಿನಾಲೆ ಕಾಮಗಾರಿಗೆ ರಂಗಸ್ವಾಮಿ ಅವರ 14 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ರಂಗಸ್ವಾಮಿಗೆ ಸರ್ಕಾರದಿಂದ 13,20,000 ರೂ. ಹಣವನ್ನು ಪರಿಹಾರವಾಗಿ ನೀಡಲಾಗಿತ್ತು. ಹೀಗಾಗಿ ರಂಗಸ್ವಾಮಿ ತಮ್ಮ ಮೂವರು ಮಕ್ಕಳಿಗೆ ಹಣ ಹಂಚಲು ಬ್ಯಾಂಕ್ನಿಂದ ಹಣ ಡ್ರಾ ಮಾಡಿ ಮನೆಯಲ್ಲಿಟ್ಟಿದ್ದರು. ಮೇ.23 ರಂದು ರಂಗಸ್ವಾಮಿ ಮನೆಗೆ ಬೀಗ ಹಾಕಿಕೊಂಡು ದನಗಳನ್ನು ಮೇಯಿಸಲು ಹೋಗಿದ್ದರು. ಈ ವೇಳೆ ಮನೆಯಲ್ಲಿ ಕಳ್ಳತನ ನಡೆದಿತ್ತು.
ರಂಗಸ್ವಾಮಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನಿಜಬಣ್ಣ ಬಯಲಾಗಿದೆ. ಜಮೀನು ಪರಿಹಾರ ಹಣ ನೀಡಲ್ಲವೆಂದು ಭಾವಿಸಿ ರಂಗಸ್ವಾಮಿಯ ಹಿರಿಯ ಮಗನೇ ಕಳ್ಳತನ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತನಿಂದ 13,20,000 ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.










