ತುಮಕೂರು ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ಡಾ.ಜಿ. ಪರಮೇಶ್ವರ್.

33

ತುಮಕೂರು: ತುಮಕೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಗಣರಾಜ್ಯೋತ್ಸವ ಆಚರಣೆ ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವರು, ತುಮಕೂರಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಣೆ ಮಾಡಿದ್ದೇವೆ. ಜಿಲ್ಲಾಡಳಿತ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಮಕೂರು ಕರ್ನಾಟಕದಲ್ಲಿ ಪ್ರತಿಷ್ಠಿತವಾದ ಜಿಲ್ಲೆ. ವಿಸ್ತೀರ್ಣದಲ್ಲಿ ತುಮಕೂರು 3ನೇ ಸ್ಥಾನ ಪಡೆದುಕೊಂಡಿದೆ. 11 ವಿಧಾನಸಭಾ ಕ್ಷೇತ್ರಗಳು ತುಮಕೂರಿಗೆ ಬರುತ್ತದೆ. ಬೆಂಗಳೂರಿಗೆ ಹತ್ತಿರವಿರುವ ವೇಗವಾಗಿ ಬೆಳೆಯುವ ಪಟ್ಟಣ ತುಮಕೂರು ಎಂದು ಹೇಳಿದರು. ಮುಂದಿನ ಹತ್ತು ವರ್ಷದಲ್ಲಿ ಬೆಂಗಳೂರು ತುಮಕೂರಿಗೆ ಯಾವುದೇ ವ್ಯತ್ಯಾಸವಿರುದಿಲ್ಲ. ತುಮಕೂರು ಸಹ ಬೆಂಗಳೂರಿಗೆ ಹೊಂದುಕೊಂಡಂತೆ ಬೆಳವಣೆಗೆ ಆಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಈಗಾಗಲೇ ನಾನು ಮನವಿ ಮಾಡಿದ್ದೇನೆ. ವಿಮಾನ ನಿಲ್ದಾಣವನ್ನು ತುಮಕೂರಿನ ಆಸುಪಾಸಿನಲ್ಲಿ ಮಂಜೂರು ಮಾಡಲು ಕೇಳಿದ್ದೇನೆ ಎಂದು ತಿಳಿಸಿದರು.