ಹಾಸನ : ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಹಿನ್ನೆಲೆ ಸಂಸದರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು, ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ರಾತ್ರಿ ಅರಸೀಕೆರೆ ಸರ್ಕಲ್ ಇನ್ಸ್ ಪೆಕ್ಟರ್ ನನ್ನು ವಿಚಾರಣಾ ಆಫೀಸರ್ ಆಗಿ ನೇಮಕ ಮಾಡುತ್ತಾರೆ. ಅವರೇ ಹೋಗಿ ಸ್ಟೇಟ್ ಮೆಂಟ್ ಮಾಡಿಸಿಕೊಂಡು ಬರುತ್ತಾರೆ. ಈ ಗಿರಾಕಿ ಉದಯ ಭಾಸ್ಕರ್ ಹಿಂಗೇ ಬರೆದು ಕೊಡಿ ಅಂತಾರೆ. ಅವರದ್ದೇ ಸರ್ಕಲ್ ಇನ್ಸ್ ಪೆಕ್ಟರ್, ಅವರು ಹೇಗೆ ಬರೆಸಿಕೊಂಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಮೂರು ಕೋಟಿ ಮನೆ ಕಟ್ಟಿದ್ದಾರೆ ಅಂತಾರೆ. ಅವರಿಗೆ ಹಣ ಎಲ್ಲಿಂದ ಬಂತು? ರೌಡಿಗಳ ಹೆಗಲ ಮೇಲೆ ಕೈಹಾಕಿ ಫೋಸ್ ಕೊಡುತ್ತಾರೆ. ಒಂದು ಲಾರಿಗೆ ತಿಂಗಳಿಗೆ 40 ಸಾವಿರದಂತೆ ಕಮಿಷನ್ ತೆಗೆದುಕೊಳ್ಳುತ್ತಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ನಂಬಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ನಗರ ಹಾಗೂ ಗ್ರಾಮೀಣ ಎರಡೂ ಠಾಣೆ ಇವೆರಡು ರೌಡಿ ಎಲಿಮೆಂಟ್ಸ್ ಇದ್ದಂಗೆ. ಬೆಳಗ್ಗೆ ಎದ್ದರೆ ಊಟ-ತಿಂಡಿ, ದಿನಕ್ಕೆ ಒಂದರಿಂದ ಎರಡು ಲಕ್ಷ ಕಲೆಕ್ಟ್ ಮಾಡುತ್ತಾರೆ. ಮರಳು ದಂಧೆ ಇತರೆ ದಂಧೆಗಳಿಂದ ಹಣ ವಸೂಲಿ ಮಾಡುತ್ತಾರೆ. ಯಾವುದಾದರೂ ಖಾಲಿ ಸೈಟ್ ಗೆ ಬೇಲಿ ಹಾಕಿಸುವುದು ನಂತರ ಅವರನ್ನು ರಾಜಿಗೆ ಕರೆಸುವುದು. ಒಂದೆರಡು ಲಕ್ಷ ಪಡೆದು ಇಬ್ಬರು ಹಂಚಿ ಕೊಳ್ಳುವುದು ಮಾಡುತ್ತಾರೆ ಎಂದು ಹಾಸನ ಡಿವೈಎಸ್ ಪಿ ಹಾಗೂ ಪಿಐ ರೇಣುಕಾ ಪ್ರಸಾದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಿಐ ಅರೋಕಿಯಪ್ಪ, ಪಿಐ ರೇಣುಕಾ ಪ್ರಸಾದ್, ಡಿವೈಎಸ್ಪಿ ಉದಯ ಭಾಸ್ಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವುದಾಗಿ ಎಸ್ಪಿ ಹೇಳಿದ್ದಾರೆ. ಈ ಸಂಬಂಧ ಏನು ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇವೆ ಎಂದು ಹೇಳಿದ್ದಾರೆ.










