ಮನೆ ಮುಂದೆ ನಾಯಿ ಕರೆತಂದು ಗಲೀಜು ಮಾಡಿಸ್ತೀಯಾ ಎಂದು ಕೇಳಿದ್ದಕ್ಕೆ ವ್ಯಕ್ತಿಯ ಕೊಲೆ…

101
firstsuddi

ಬೆಂಗಳೂರು: ಮನೆ ಮುಂದೆ ನಾಯಿ ಕರೆತಂದು ಗಲೀಜು ಮಾಡಿಸ್ತೀಯಾ ಎಂದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುನಿರಾಜು(68) ಮೃತ ದುರ್ದೈವಿ. ಪ್ರಮೋದ್ ಮತ್ತು ರವಿಕುಮಾರ್ ನಾಯಿ ಜೊತೆಗೆ ಬಂದು ಮುನಿರಾಜು ಮನೆ ಮುಂದೆ ಸಿಗರೇಟ್ ಸೇದಿ ಸಮಸ್ಯೆ ಉಂಟು ಮಾಡಿದ್ದರು. ಈ ವಿಚಾರಕ್ಕೆ ಮುನಿರಾಜು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ.  ಪೊಲೀಸರು ಇಬ್ಬರ ಬಳಿಯೂ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು.

ಮಾರನೇ ದಿನ ಮತ್ತೆ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಪ್ರಮೋದ್ ಮತ್ತು ರವಿಕುಮಾರ್ ದೊಣ್ಣೆಯಿಂದ ಮುನಿರಾಜುಗೆ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಮುನಿರಾಜು ಮೃತಪಟ್ಟಿದ್ದು, ಆತನ ಜೊತೆಯಿದ್ದ ಮುರುಳಿ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೃತ್ಯವೆಸಗಿದ ಪ್ರಮೋದ್, ರವಿಕುಮಾರ್ ಹಾಗೂ ಇದಕ್ಕೆ ಸಹಾಯ ಮಾಡಿದ ಪ್ರಮೋದ್ ಪತ್ನಿ ಪಲ್ಲವಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.