ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಜಾನಪದ ಲೋಕದ ಅನಾವರಣ…

66
firstsuddi

ಚಿಕ್ಕಮಗಳೂರು: ಜಾನಪದವನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಕುವೆಂಪು ಕಲಾಮಂದಿರದಲ್ಲಿ ಇಂದು ಆಯೋಜಿಸಿದ್ದ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನ, ಕಲಾಮಂದಿರದಲ್ಲಿ ಜಾನಪದ ಲೋಕವನ್ನು ಅನಾವರಣಗೊಳಿಸಿತು.

ಸಮ್ಮೇಳನದಲ್ಲಿ ಪ್ರಾರ್ಥನೆ, ಸ್ವಾಗತದಿಂದ ಹಿಡಿದು ವಂದನಾರ್ಪಣೆಯವರೆಗೆ ನಡೆದ ಎಲ್ಲಾ ಕಾರ್ಯಕ್ರಮಗಳೂ ಜಾನಪದಮಯವಾಗಿದ್ದವು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕಜಾಪ ರಾಜ್ಯಾಧ್ಯಕ್ಷ ಪ್ರೊ. ಹಿ.ಶಿ.ರಾಮಚಂದ್ರೇಗೌಡ, ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರೂ ಭಾಷಣದ ವೇಳೆ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಗ್ರಾಮೀಣ ವಾದ್ಯಗಳ ಭರಾಟೆ ವೀರಗಾಸೆಯ ಅಬ್ಬರ ಕಲಾಮಂದಿರದಲ್ಲಿ ಅನುರಣಿಸಿತು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತ ಗೋಷ್ಠಿಗಳು ಉಪನ್ಯಾಸ, ಜಾನಪದ ಗೀತೆಗಳ ಗಾಯನ, ನೃತ್ಯ ಜರುಗಿದವು. ಬೆಳಿಗ್ಗೆ ಕಲಾಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಅತ್ತಿಕಟ್ಟೆ ಗುರುನಾಥಗೌಡ ರಾಷ್ಟ್ರಧ್ವಜಾರೋಹಣ ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ ನಾಡಧ್ವಜ ಕಜಾಪ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಜಾನಪದ ಧ್ವಜಾರೋಹಣವನ್ನು ನೆರವೇರಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ವಿವಿಧ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷ ಹಿರಿಯ ಭಜನಾ ಕಲಾವಿದ ಬೆಳವಾಡಿ ಪರಮೇಶ್ವರಪ್ಪ ಅವರನ್ನು ಸಾರೋಟಿನಲ್ಲಿ ಕುಳ್ಳಿರಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಲಾಮಂದಿರಕ್ಕೆ ಕರೆತರಲಾಯಿತು.

ಪುರುಷರು ಮತ್ತು ಮಹಿಳೆಯರ ವೀರಗಾಸೆ, ಡೊಳ್ಳುಕುಣಿತ, ಗ್ರಾಮೀಣ ವಾದ್ಯಗಳು, ಭಜನಾ ತಂಡಗಳು, ಚಾಮ ಕುಣಿತ, ಪೂಜಾಕುಣಿತ, ಕೋಲಾಟ, ದಕ್ಷಿಣಕನ್ನಡದ ತಟ್ಟಿ ಗೊಂಬೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮಾರ್ಗದುದ್ದಕ್ಕೂ ಜಾನಪದದ ವೈಭವವನ್ನು ಅನಾವರಣಗೊಳಿಸಿದವು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಳ್ಗೊಂಡಿದ್ದರು.

ಮೆರವಣಿಗೆ ನಂತರ ಕಲಾಮಂದಿರದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ಜಾನಪದ ವಸ್ತುಗಳ ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಉದ್ಘಾಟಿಸಿದರು. ಜಾನಪದ ವಾದ್ಯಗಳ ವೈಭವಕ್ಕೆ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಚಾಲನೆ ನೀಡಿದರು. ಕ.ಜಾ.ಪ ರಾಜ್ಯಾಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಜಾನಪದ ಸಿರಿ ಪ್ರಶಸ್ತಿ, ಸ್ಮರಣಿಕೆಗಳನ್ನು ಬಿಡುಗಡೆಗೊಳಿಸಿದರು.

ಸಮ್ಮೇಳನಾಧ್ಯಕ್ಷ ಹಿರಿಯ ಭಜನಾ ಕಲಾವಿದ ಬೆಳವಾಡಿ ಪರಮೇಶ್ವರಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. 18 ಜಾನಪದ ಕಲಾವಿದರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಆಶಯನುಡಿಗಳನ್ನಾಡಿದರು.

ಆಶಾ ಕಿರಣ ಅಂದಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಮುಖಂಡ ಡಾ.ಡಿ.ಎಲ್.ವಿಜಯಕುಮಾರ್, ಜಾನಪದ ಅಕಾಡೆಮಿ ಮಾಜಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ, ಸಾಹಿತಿ ಜಿ.ಬಿ.ವೀರೂಪಾಕ್ಷ, ಕಜಾಪ ಹರಿಹರಪುರ ಹೋಬಳಿ ಅಧ್ಯಕ್ಷೆ ತಮನ್ನಾ ಮುನಾವರ್ ಸೇರಿದಂತೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗಮನ ಸೆಳೆದ ವಸ್ತು ಪ್ರದರ್ಶನ:
ಜಾನಪದ ಸಮ್ಮೇಳನದ ಅಂಗವಾಗಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಜಾನಪದ ಪರಿಕರಗಳ ವಸ್ತು ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಜಾನಪದರು ಬಳಸುತ್ತಿದ್ದ ಪ್ರಾಚೀನಕಾಲದ ನೀರು ಸೇದುವ ರಾಟೆ, ಕೃಷಿಪರಿಕರಗಳು, ರಾಗಿಬೀಸುವ ಕಲ್ಲು, ಮೀನು ಹಿಡಿಯುವ ಕೂಳಿ, ಹಸೆಮಣೆ ಸೇರಿದಂತೆ ಪ್ರದರ್ಶನದಲ್ಲಿ ಇಡಲಾಗಿದ್ದ ವಸ್ತುಗಳು ನೋಡುಗರ ಕಣ್ಮನ ಸೆಳೆದವು.

ಬಾಕ್ಸ್-1
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ನೀಡುವ ರೀತಿ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಕ್ರಮಗಳಿಗೂ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಸದ್ಯದಲ್ಲೇ ತಾವು ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಪರಿಷತ್ತಿನ ಕಾರ್ಯಕ್ರಮಗಳಿಗೂ ಅನುದಾನ ನೀಡುವಂತೆ ಮನವೊಲಿಸಲಾಗುವುದು ಎಂದು ಭರವಸೆ ನೀಡಿದರು.

ಸಾಹಿತ್ಯ, ಸಂಸ್ಕೃತಿ ಮತ್ತು ಕಲೆ ಉಳಿದಿರುವುದು ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ಅದೇ ರೀತಿ ಜಾನಪದ ಕಲೆ ಉಳಿದಿರುವುದು ನಮ್ಮರಾಜ್ಯ ಮತ್ತು ನಮ್ಮಜಿಲ್ಲೆಯಲ್ಲಿ ಮಾತ್ರ ಎಂದ ಅವರು, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಬಾಕ್ಸ್-2
ಜಾನಪದಕಲೆ, ಸಾಹಿತ್ಯ, ಸಂಸ್ಕೃತಿ, ದಾಸಸಾಹಿತ್ಯ, ತತ್ವಪದ ಮತ್ತು ವಚನ ಸಾಹಿತ್ಯದ ಅಡಿಯಲ್ಲಿ ಮತ್ತು ಸಂಬಂಧಗಳ ಅಡಿಯಲ್ಲಿ ನಮ್ಮ ಹಿರಿಯರು ಈ ನಾಡನ್ನು ಕಟ್ಟಿ ಬೆಳೆಸಿದ್ದಾರೆ.ಆದರೆ, ಇಂದು ತಂದೆ ತಾಯಿ, ಅಕ್ಕ ತಂಗಿ, ಅಣ್ಣತಮ್ಮ ಸೇರಿದಂತೆ ಯಾವುದೇ ಸಂಬಂಧಗಳೂ ಉಳಿದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ವಿಷಾಧಿಸಿದರು.

ಜಾನಪದವನ್ನು ಪುನರುತ್ತಾನಗೊಳಿಸಿ ಶ್ರೀಮಂತಗೊಳಿಸಿದರೆ ನಮ್ಮ ಬದುಕು, ನಮ್ಮ ನಾಡು ಶ್ರೀಮಂತವಾಗುತ್ತದೆ ಹಾಹಾಗಿ ಜಾನಪದವನ್ನು ಶ್ರೀಮಂತಗೊಳಿಸಲಾಗಿದೆ. ನಾಡಿನಲ್ಲಿ ಮಾನವೀಯ ಮೌಲ್ಯಗಳು ಉಳಿಯಬೇಕಾದರೆ ನಮ್ಮಲ್ಲಿನ ಸ್ವಾರ್ಥ ತೊಲಗಿ ಸಂಬಂಧಗಳು ಗಟ್ಟಿಯಾಗಬೇಕಾದರೆ ಜಾನಪದವನ್ನು ಶ್ರೀಮಂತಗೊಳಿಸಬೇಕು ಎಂದು ಮನವಿ ಮಾಡಿದರು.

ಬಾಕ್ಸ್-3
ಜಾನಪದವನ್ನು ಕೈಬಿಟ್ಟ ಪರಿಣಾಮ ಸೃಷ್ಟಿ ಮಾಡುವವರಾಗಿದ್ದ ನಾವಿಂದು ಕೊಳ್ಳುವವರಾಗಿದ್ದೇವೆ. ತಿನ್ನುವವರಾಗಿದ್ದೇವೆ. ರಾಕ್ಷಸರಾಗುತ್ತಿದ್ದೇವೆ ಎಂದು ಕರ್ನಾಟಕ ಜಾನಪದ ಪರಿಷತ್‍ ರಾಜ್ಯಾಧ್ಯಕ್ಷ ಪ್ರೋ. ಹಿ.ಶಿ.ರಾಮಚಂದ್ರೇಗೌಡ ವಿಷಾಧಿಸಿದರು.
ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಇಂದಿನ ಪೀಳಿಗೆ ಅವುಗಳನ್ನು ಕಲಿಯಬೇಕು. ಜಾನಪದ ಗೀತೆಗಳನ್ನು ಕಲೆಯನ್ನು ಕಲಿಯುವುದರಿಂದ ನಮಗೆ ಯಾವುದೇ ಅಪಮಾನವಾಗುವುದಿಲ್ಲ. ಕರಾವಳಿಯಲ್ಲಿರುವ ಎಲ್ಲಾ ಕಲಾವಿದರೂ ಉನ್ನತ ಶಿಕ್ಷಣವನ್ನು ಮಾಡಿದ್ದಾರೆ. ಅದೇ ರೀತಿ ನಮ್ಮಲ್ಲೂ ಪದವಿ ಮಾಡಿದವರು ಸಹ ಜಾನಪದವನ್ನು ಕಲಿಯಬೇಕು. ಹಾಗಾದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.

ಬಾಕ್ಸ್-4
ರಾಜ್ಯ ಸರ್ಕಾರ ಕಲಾವಿದರ ವಯಸ್ಸನ್ನು ಪರಿಗಣಿಸದೆ ಯುವಕಲಾವಿದರಿಗೂ ಮಾಶಾಸನವನ್ನುನೀಡಬೇಕು ಎಂದು ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ ಒತ್ತಾಯಿಸಿದರು.

ಜಾನಪದ ಕಲಾವಿದರಿಗೆ ಮಾಶಾಸನ ನೀಡಲು ರಾಜ್ಯ ಸರ್ಕಾರ 60ವರ್ಷ ವಯಸ್ಸನ್ನು ನಿಗಧಿಗೊಳಿಸಿದೆ. ಇದರಿಂದಾಗಿ ವಯೋವೃದ್ಧ ಕಲಾವಿದರು ಮಾತ್ರ ಕಂಡು ಬರುತ್ತಿದ್ದಾರೆ. ಯುವಜನತೆ ಕಲೆ ಕಲಿಯಲು ಆಸಕ್ತಿ ತೋರುತ್ತಿಲ್ಲ ಎಂದು ವಿಷಾಧಿಸಿದರು.

ಕಲಾವಿದರಿಗೆ ಮತ್ತು ಕಲೆಗೆ ಯಾವುದೇ ವಯಸ್ಸಿನ ಹಂಗಿಲ್ಲ. ಕಲೆ ಎಲ್ಲರಿಗೂ ಒಲಿಯುತ್ತದೆ ಎಂದ ಅವರು, ಯುವಜನತೆಯೂ ಸಹ ಕಲೆಯನ್ನು ಕಲಿತು ಜಾನಪದ ಉಳಿಯಬೇಕಾದರೆ ರಾಜ್ಯ ಸರ್ಕಾರ ಅವರಿಗೂ ಮಾಶಾಸನ ನೀಡಬೇಕು. ಮಾಶಾಸನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.

ಬಾಕ್ಸ್-5
ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ನೀಡುತ್ತಿರುವಂತೆ ರಾಜ್ಯ ಸರ್ಕಾರ ಜಾನಪದ ಸಮ್ಮೇಳನಗಳಿಗೂ ಅನುದಾನವನ್ನು ನೀಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಒತ್ತಾಯಿಸಿದರು.

ಈ ಕುರಿತು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ವೇದಿಯಲ್ಲಿದ್ದ ಶಾಸಕರಾದ ಎಚ್.ಡಿ.ತಮ್ಮಯ್ಯ ಮತ್ತು ಎಸ್.ಎಲ್.ಭೋಜೇಗೌಡ ಅವರಿಗೆ ಮನವಿ ಮಾಡಿದರು.