ನಿಗೂಢವಾಗಿ ಕಣ್ಮರೆಯಾದ ಕಾಫಿ ಡೇ ಮಾಲೀಕನ ಅಳಲು…

270
firstsuddi

ಚಿಕ್ಕಮಗಳೂರು : ಸದ್ಯ ನಿಗೂಢವಾಗಿ ಕಾಣೆಯಾಗಿರುವ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರು ಕಳೆದ ಶನಿವಾರ ಕಾಫಿ ಡೇ ಆಡಳಿತ ಮಂಡಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಬಹಿರಂಗಗೊಂಡಿದೆ. ಈ ಪತ್ರದಲ್ಲಿ ಸಿದ್ದಾರ್ಥ್ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಹೋರಾಟ ನಡೆಸಿಯೂ ತಾವು ಉದ್ಯಮದಲ್ಲಿ ವಿಫಲರಾಗಿರುವುದಾಗಿಯೂ, ತಮ್ಮ ನಡೆಯನ್ನು ಕ್ಷಮಿಸುವಂತೆಯೂ ಅವರು ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
“ಸಂಸ್ಥೆಯ ಆಡಳಿತ ಮಂಡಳಿ ಮತ್ತು ಕಾಫಿ ಡೇ ಕುಟುಂಬಕ್ಕೆ ಬದ್ಧತೆ ಮತ್ತು ಕಠಿಣ ಪರಿಶ್ರಮದೊಂದಿಗೆ ನಮ್ಮ ಕಂಪನಿ ಈ 37ವರ್ಷದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ ಮಾಡಿದೆ. ನನ್ನ ಪಾಲುದಾರಿಕೆಯ ತಂತ್ರಜ್ಞಾನ ಸಂಸ್ಥೆಯಲ್ಲೂ 20ಸಾವಿರ ಉದ್ಯೋಗಗಳನ್ನು ನಾನು ಒದಗಿಸಿದ್ದೇನೆ. ಆದರೆ, ಲಾಭದಾಯಕ ವ್ಯಾಪಾರ ಸಂಸ್ಥೆಯೊಂದನ್ನು ರೂಪಿಸಲು ನಾನು ವಿಫಲನಾದೆ.
ಎಲ್ಲಾ ರೀತಿಯಲ್ಲೂ ನಾನು ಸೋತಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟ ಎಲ್ಲರ ನಂಬಿಕೆಗಳಿಗೆ ಭಂಗ ತಂದಿದ್ದೇನೆ. ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಸಹವರ್ತಿಯೊಬ್ಬರು ನಾನು ಷೇರುಗಳನ್ನು ಮರು ಖರೀದಿಮಾಡಬೇಕೆಂದು ತೀವ್ರ ಒತ್ತಡ ಹೇರುತ್ತಿದ್ದಾರೆ. ನನ್ನ ಸ್ನೇಹಿತನಿಂದ ದೊಡ್ಡ ಮೊತ್ತದ ಹಣ ಪಡೆದು ಆರು ತಿಂಗಳ ಹಿಂದೆ ನಾನು ಈ ವ್ಯವಹಾರ ಮಾಡಿದ್ದೆ. ನನಗೆ ಸಾಲ ಕೊಟ್ಟಿರುವ ಇತರ ಕೆಲವರೂ ಈಗಾ ತೀವ್ರ ಒತ್ತಡ ಹೇರುತ್ತಿದ್ದಾರೆ. ಇದೆಲ್ಲವೂ ನನ್ನನ್ನು ಈ ಪರಿಸ್ಥಿತಿಗೆ ದೂಡಿದೆ.
ನಾನು ಹಿಂದಿನಿಂದಲೂ ತೀವ್ರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೆ, ಈಗಾ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಮೈಂಡ್ ಟ್ರೀ ಸಂಸ್ಥೆಯ ಮಾರಾಟ, ಕಾಫಿ ಡೇ ಮಾಲೀಕತ್ವದ ಷೇರುಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಡಿಜಿಯಿಂದ ನನಗೆ ತೀವ್ರ ಕಿರುಕುಳ ಉಂಟಾಗಿತ್ತು.
ಇದು ಪ್ರತಿದಿನದ ವಹಿವಾಟಿಗೆ ಬೇಕಿದ್ದ ಹಣಕ್ಕೆ ಪರೆದಾಡುವ ಸ್ಥಿತಿ ನಿರ್ಮಿಸಿತು. ಅವರು ಏನು ಮಾಡಿದರೋ ಅದು ನ್ಯಾಯ ಸಮ್ಮತ ಅಲ್ಲ.
ಹೊಸ ವ್ಯವಸ್ಥಾಪಕ ಸಮಿತಿಯೊಂದಿಗೆ ಇನ್ನು ಮುಂದೆ ಈ ಸಂಸ್ಥೆಯನ್ನು ಬಲಿಷ್ಠವಾಗಿ ನಡೆಸಿಕೊಂಡು ಹೋಗುವಂತೆ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಈವರೆಗಿನ ಎಲ್ಲ ತಪ್ಪುಗಳಿಗೆ ನಾನೊಬ್ಬನೇ ಕಾರಣ. ಈ ವ್ಯವಹಾರಗಳ ಬಗ್ಗೆ ನನ್ನ ತಂಡಕ್ಕಾಗಲಿ, ಆಡಿಟರ್‍ಗಳಿಗಾಗಲಿ, ಹಿರಿಯ ವ್ಯವಸ್ಥಾಪಕರಿಗಾಗಲಿ ಯಾವುದೇ ಮಾಹಿತಿ ಇಲ್ಲ. ನಾನು ಈ ಮಾಹಿತಿಯನ್ನು ನನ್ನ ಕುಟುಂಬವೂ ಸೇರಿದಂತೆ ಯಾರೊಂದಿಗೂ ನಾನು ಹಂಚಿಕೊಂಡಿಲ್ಲ.
ವಂಚಿಸುವ ಅಥವಾ ಯಾರನ್ನಾದರೂ ದಾರಿತಪ್ಪಿಸುವ ಉದ್ದೇಶ ನನ್ನದಾಗಿರಲಿಲ್ಲ. ಒಬ್ಬ ಉದ್ಯಮಿಯಾಗಿ ನಾನು ಸೋತಿದ್ದೇನೆ. ಈ ಪತ್ರದೊಂದಿಗೆ ನನ್ನ ಆಸ್ತಿಯ ಪಟ್ಟಿ ಮತ್ತು ಅವರ ತಾತ್ಕಾಲಿಕ ಮೌಲ್ಯವನ್ನು ಉಲ್ಲೇಖಿಸುತ್ತಿದ್ದೇನೆ. ನಮ್ಮ ಹೊಣೆಗಳಿಗೆ ಹೋಲಿಸಿದರೆ ಈ ಆಸ್ತಿಯ ಮೊತ್ತ ಹೆಚ್ಚಾಗಿಯೇ ಇದೆ. ಎಲ್ಲರಿಗೂ ಅವರಿಗೆ ಸಲ್ಲಬೇಕಾದ ಹಣ ಹಿಂದಿರುಗಿಸಲು ನೆರವಾಗುತ್ತದೆ.” ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
ಆದರೆ ಐ.ಟಿ. ಇಲಾಖೆಯವರು ಸಿದ್ದಾರ್ಥ್ ಅವರಿಗೆ ಯಾವುದೇ ಕಿರುಕುಳ ನೀಡಲಿಲ್ಲ. ಅವರು ದೊಡ್ಡ ಮೊತ್ತದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಯುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.