ಬೆಂಗಳೂರು : ಡಾ.ಜಿ. ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರು, ಇದು ರಾಜಕೀಯ ದ್ವೇಷದಿಂದ ಮಾಡುತ್ತಿರುವ ದಾಳಿ. ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ. ಪರಮೇಶ್ವರ್ ಅವರ ನಿವಾಸದ ಮೇಲಿನ ಐಟಿ ದಾಳಿ ಖಂಡನೀಯ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಜೆಪಿ ನಾಯಕರ ಮೇಲೆ ಯಾವುದೇ ದಾಳಿ ನಡೆಯುವುದಿಲ್ಲ. ರಾಜ್ಯದಲ್ಲಿ 15 ಕ್ಷೇತ್ರಕ್ಕೆ ಉಪಚುನಾವಣೆ ಇರುವುದರಿಂದ ಇಂತಹ ಕೆಲಸ ನಡೆಯುತ್ತಿವೆ. ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.










