ಪರೇಶ್ ಮೇಸ್ತಾ ಸಾವು ಪ್ರಕರಣ ; ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಕೆ…

61
firstsuddi

ಕಾರವಾರ : ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ ಹಿನ್ನೆಲೆ ಹೊನ್ನಾವರದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಪರೇಶ್ ಮೇಸ್ತಾ ಕುಟುಂಬದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

2017ರ ಡಿ. 6ರಂದು ನಡೆದ ಕೋಮುಗಲಭೆಯಲ್ಲಿ ಪರೇಶ್ ಮೇಸ್ತಾ ನಾಪತ್ತೆಯಾಗಿದ್ದ. ಎರಡು ದಿನಗಳ ಬಳಿಕ ಆತನ ಮೃತದೇಹ ಹೊನ್ನಾವರದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ವಿಪಕ್ಷ ಹಾಗೂ ಜನರ ಒತ್ತಾಯದ ಮೇರೆಗೆ ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ಕಳೆದ ಅಕ್ಟೋಬರ್ 6 ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದ ಸಿಬಿಐ ತನಿಖಾ ತಂಡ, ಪರೇಶ್ ಮೇಸ್ತಾ ಕೊಲೆ ನಡೆದಿಲ್ಲ. ಅದು ಸಹಜ ಸಾವು. ಆರೋಪಿತರನ್ನು ದೋಷಮುಕ್ತ ಮಾಡಬಹುದೆಂದು ನ್ಯಾಯಾಲಯಕ್ಕೆ ವರದಿ ನೀಡಿತ್ತು. ಆದರೆ ಸಿಬಿಐ ಬಿ ರಿಪೋರ್ಟ್ ಬಳಿಕ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಅವರಿಗೆ ನೋಟಿಸ್ ನೀಡಿ ನ್ಯಾಯಾಲಯದ ಮುಂದೆ ಹಾಜರಾಗಿ ವರದಿ ಕುರಿತು ಅಭಿಪ್ರಾಯ ಸಲ್ಲಿಕೆಗೆ ಸೂಚಿಸಲಾಗಿತ್ತು.

ಅದರಂತೆ, ಸಿಬಿಐ ಸಲ್ಲಿಸಿದ ವರದಿ ಒಪ್ಪಿಗೆಯಿಲ್ಲ ಎಂದು ಪರೇಶ್ ಮೇಸ್ತಾ ಕುಟುಂಬ ವಕೀಲರಾದ ನಾಗರಾಜ ನಾಯಕ ಅವರ ಮೂಲಕ ಹೊನ್ನಾವರದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿ ಆಕ್ಷೇಪಣಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ.