ಪಿಎಸ್‍ಐ ನೇಮಕಾತಿ ಅಕ್ರಮ.. ಸಿಐಡಿ ವರದಿ ಬಳಿಕವೇ ಮುಂದಿನ ಕ್ರಮ : ಸಿಎಂ

64
firstsuddi

ಬೆಂಗಳೂರು : ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಮತ್ತೆ ಪರೀಕ್ಷೆ ಮಾಡಿ ಎಂಬ ಒತ್ತಾಯ ಕೇಳಿ ಬಂದಿದೆ. ಆದರೆ ಸಿಐಡಿ ವರದಿ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಪಿಎಸ್ಐ ನೇಮಕಾತಿ ಪ್ರಕ್ರಿಯೆ ಪ್ರಕರಣ ಅಕ್ರಮ ಆರೋಪ ಕುರಿತು ತನಿಖೆ ನಡೆಸಲು ಸಿಐಡಿಗೆ ಕೊಟ್ಟಿದ್ದಾರೆ. ನಾವೇ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಸಿಐಡಿಗೆ ಕೊಟ್ಟಿದ್ದೇವೆ. ಯಾರೇ ತಪಿತಸ್ಥರಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹುಬ್ಬಳ್ಳಿ ಗಲಾಟೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದೇವೆ. ಪ್ರಕರಣದ ತನಿಖೆಯಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ?, ಯಾವ ನಾಯಕರು ಇದ್ದಾರೆ?, ಎಲ್ಲವೂ ತನಿಖೆಯಲ್ಲಿ ಗೊತ್ತಾಗಲಿದೆ. ಯಾರು ತಪ್ಪಿತಸ್ಥರಿದ್ದಾರೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಂಪುಟ ಪುನಾರಚನೆ ವಿಚಾರ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜತೆ ಮಾತುಕತೆ ನಡೆಸಲಾಗಿದೆ. ದೆಹಲಿಗೆ ಹೋದ ನಂತರ ಸಭೆ ಮಾಡಿ ತಿಳಿಸುತ್ತೇವೆ. ಅಮೇಲೆ ನೀವು ಬನ್ನಿ ಎಂದು ಅವರು ಹೇಳಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಸೂಚನೆ ನೀಡುತ್ತಿದ್ದಂತೆ ದೆಹಲಿಗೆ ತೆರಳಿ ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.