ನವದೆಹಲಿ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಭೇಟಿ ನೀಡಿ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದು, ಹಣ ಬಿಡುಗಡೆ ಬಗ್ಗೆ ಚರ್ಚೆ ಮಾಡಿ ಹೇಳುತ್ತೇವೆ ಎಂದು ತಿಳಿಸಿದ್ದಾರೆ. ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಮೋದಿಯವರು 40 ನಿಮಿಷಗಳ ಕಾಲ ರಾಜ್ಯದ ಪ್ರವಾಹದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಇನ್ನೊಂದು ವಿಶೇಷ ಅಧ್ಯಯನ ತಂಡವನ್ನು ಕಳುಹಿಸುತ್ತಾರೆ. ಹಿಂದೆಂದೂ ನೋಡದ ರೀತಿಯಲ್ಲಿ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದಿಂದ ಹೆಚ್ಚುವರಿ ನೀರನ್ನು ಹರಿಬಿಟ್ಟಿರುವುದರಿಂದ ಆಗಿರುವ ಅನಾಹುತದ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇವೆ. ಪ್ರವಾಹದಿಂದ ಅಂದಾಜು 40ಸಾವಿರ ಕೋಟಿ ರೂ ನಷ್ಟವಾಗಿದೆ. ಮೋದಿಯವರಿಗೆ ಎಲ್ಲಾ ಮಾಹಿತಿಯನ್ನು ನೀಡಿ ಮನವರಿಕೆ ಮಾಡಿದ್ದೇನೆ. ಹಣ ಬಿಡುಗಡೆ ಬಗ್ಗೆ ಚರ್ಚೆ ಮಾಡಿ ಹೇಳುತ್ತೇವೆ ಎಂದು ತಿಳಿಸಿದ್ದಾರೆ ಎಂದರು.










