ಮಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಎನ್‍ಐಎ ಬಹುಮಾನ ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬವರ ಮಗ ಮೊಹಮ್ಮದ್ ಷರೀಫ್(53)ಗೆ 5 ಲಕ್ಷ ಹಾಗೂ ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ಅಬೂಬಕರ್ ಮಗ ಮಸೂದ್ ಕೆ.ಎ(40)ಗೆ 5 ಲಕ್ಷ ಒಟ್ಟು 10 ಲಕ್ಷ ಬಹುಮಾನವನ್ನು ಎನ್ಐಎ ಘೋಷಿಸಿದೆ.
ಆರೋಪಿಗಳ ಸುಳಿವು ಪತ್ತೆಯಾದರೆ ಬೆಂಗಳೂರಿನ ದೊಮ್ಮಲೂರು ಬಳಿ ಇರುವ ಎನ್ ಐಎ ಎಸ್ ಪಿಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.
ಘಟನೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26ರ ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಈವರೆಗೂ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.










