ಮಂಗಳೂರು : ಕಾಲೇಜಿನ ಪ್ರಾಧ್ಯಾಪಕಿಯೋರ್ವರ ಬಗ್ಗೆ ಮಾನಹಾನಿಕರವಾಗಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲದ ಪ್ರಕಾಶ್ ಶೆಣೈ, ಬಂಟ್ವಾಳ ಸಿದ್ದಕಟ್ಟೆಯ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ನಡ್ಪಾಲುವಿನ ತಾರಾನಾಥ ಬಿ.ಎಸ್.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಬಂಟ್ವಾಳ ಖಾಸಗಿ ಕಾಲೇಜಿನ ಪ್ರೊಫೆಸರ್ ಆಗಿ ಸದ್ಯ ಡೆಪ್ಯುಟೇಶನ್ ನಲ್ಲಿರುವ ಮಹಿಳಾ ಪ್ರೊಫೆಸರ್ ವಿರುದ್ದ ಮಾನಹಾನಿಕರವಾದ ಪತ್ರವನ್ನು, ಪೋಸ್ಟರ್ ಗಳನ್ನು ತಯಾರಿಸಿ ಅಂಚೆ ಮೂಲಕ ಅವರ ಪರಿಚಯದ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತಿದ್ದರು.
ಇದಾದ ನಂತರ ಪ್ರಾಧ್ಯಾಪಕಿಯ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್ ನಲ್ಲಿ ಅಂಟಿಸಿದ್ದರು. ಇದನ್ನು ನೋಡಿದ ಸಾರ್ವಜನಿಕರು ಪ್ರಾಧ್ಯಾಪಕಿಗೆ ಕರೆ ಮಾಡಿ ಅಶ್ಲೀಲವಾಗಿ, ಮಾನಹಾನಿಕರವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು.
ಸುಮಾರು ಒಂದು ವರ್ಷದಿಂದ ಇಂತಹ ಮಾನಹಾನಿಯಿಂದ ನೊಂದ ಶಿಕ್ಷಕಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಇದೀಗ ಮೂವರನ್ನು ಬಂಧಿಸಲಾಗಿದೆ. ಈ ಕೃತ್ಯವೆಸಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.










