ರಾಮನಗರ : ಪ್ರೀತಿ ನಿರಾಕರಿಸಿದ್ದಕ್ಕೆ 17 ವರ್ಷದ ಬಾಲಕಿ ಮೇಲೆ 22 ವರ್ಷದ ಯುವಕನೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಘಟನೆ?
ಸುಮಂತ್ ಎಂಬಾತ ಕಾರ್ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಆತ ಗ್ಯಾರೇಜ್ ಬಳಿ ಇರುವ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆ ಬಾಲಕಿ ಪ್ರತಿನಿತ್ಯ ಗ್ಯಾರೇಜ್ ಮುಂದಿನಿಂದಲೇ ಕಾಲೇಜ್ ಗೆ ಹೋಗಿ ಬರುತ್ತಿದ್ದಳು. ಇನ್ನು ಸುಮಂತ್ ಪ್ರತಿನಿತ್ಯ ಬಾಲಕಿಯನ್ನು ದಾರಿ ಮಧ್ಯೆ ಅಡ್ಡಹಾಕಿ ಪ್ರೀತಿಸುವಂತೆ ಪೀಡಿಸುತ್ತಿದ್ದಳು. ಬಾಲಕಿ ಇವನ ಪ್ರೀತಿಯನ್ನು ನಿರಾಕರಿಸುತ್ತಲೇ ಬಂದಿದ್ದಾಳೆ. ಕಳೆದ ದಿನ ರಾತ್ರಿ 8-9 ಗಂಟೆ ಸುಮಾರಿಗೆ ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ಬಾಲಕಿಯನ್ನು ಅಡ್ಡಗಟ್ಟಿ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಬಾಲಕಿ ಅವನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಈ ವೇಳೆ ಸುಮಂತ್ ತಾನೂ ತಂದಿದ್ದ ಆ್ಯಸಿಡ್ ಅನ್ನು ಅವಳ ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ.
ಆ್ಯಸಿಡ್ ದಾಳಿಯಿಂದ ನರಳಾಡುತ್ತಿದ್ದ ಬಾಲಕಿಯನ್ನು ಕೂಡಲೇ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ್ಯಸಿಡ್ ದಾಳಿಯಿಂದ ಬಾಲಕಿಯ ಎಡ ಕಣ್ಣಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ನಡೆದ ಕೆಲ ಹೊತ್ತಿನಲ್ಲೇ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.










