ಬೆಂಗಳೂರು: ಕರ್ನಾಟಕ ಬಿಜೆಪಿ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಬಿ.ವೈ.ವಿಜಯೇಂದ್ರ ಅವರು ಪದಗ್ರಹಣ ಮಾಡಲಿದ್ದು, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಪದಗ್ರಹಣಕ್ಕೂ ಮೊದಲು ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ವಿಜಯೇಂದ್ರರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುತ್ತದೆ. ಬಳಿಕ ಗೋಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ ಪೂರ್ಣಾಹುತಿಯಲ್ಲಿ ನಿಯೋಜಿತ ಅಧ್ಯಕ್ಷ ವಿಜಯೇಂದ್ರ ಭಾಗಿಯಾಗಲಿದ್ದಾರೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನಗಳು ನೆರವೇರುತ್ತಿದೆ.
ಬಿಜೆಪಿ ಕಚೇರಿಯಿರುವ ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ಗಳು ಮಿಂಚುತ್ತಿವೆ. ಅಲ್ಲದೇ ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಕಮಲಪಾಳಯದಲ್ಲಿ ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರಿಗೆ ಖುದ್ದು ಕರೆ ಮಾಡಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಜಿಲ್ಲಾಧ್ಯಕ್ಷರು ಸೇರಿ ಹಲವರಿಗೆ ವಿಜಯೇಂದ್ರ ಅವರೇ ಕರೆ ಮಾಡಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.










