ಮಂಡ್ಯ : ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಜೀವನ ಕಥೆ ಇದೀಗ ಬೆಳ್ಳಿ ತೆರೆ ಮೇಲೆ ಬರಲಿದೆ.
ಹೌದು, ಮಂಡ್ಯದ ಸಾಹಿತಿ ಕೃಷ್ಣ ಸ್ವರ್ಣಸಂದ್ರ ಅವರು ಐಎಎಸ್ ಅಧಿಕಾರಿಯ ಬಯೋಪಿಕ್ ಮಾಡಲು ತೀರ್ಮಾನಿಸಿದ್ದಾರೆ. ಭಾರತ ಸಿಂಧೂರಿ ಟೈಟಲ್ ನಲ್ಲಿ ಸಿನಿಮಾ ಬರುತ್ತಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.
ಈ ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಅವರು ಬೆಳೆದು ಬಂದ ಹಾದಿ, ಆರಂಭದಲ್ಲಿ ಮಂಡ್ಯದ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಾಡಿದ್ದ ಕೆಲಸ ಹಾಗೂ ಸಾಧನೆ, ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭಗಳು ಹಾಗೂ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಘಟನೆಗಳನ್ನು ಈ ಚಿತ್ರದಲ್ಲಿ ಹೆಣೆಯಲಾಗಿದೆ.
2020ರ ಜೂನ್ 15ರಂದೇ ಈ ಸಿನಿಮಾದ ಹೆಸರನ್ನು ರಿಜಿಸ್ಟರ್ ಮಾಡಿಸಲಾಗಿದ್ದು, ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರೇ ಹೊತ್ತಿದ್ದಾರೆ. ಭಾರತ ಸಿಂಧೂರಿ ಸಿನಿಮಾದಲ್ಲಿ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಅಕ್ಷತಾ ಪಾಂಡವಪುರ ನಟಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟಿ ಅಕ್ಷತಾ ಸಿನಿಮಾ ಪ್ಲಾನ್ ಆಗಿರೋದು ನಿಜ. ಆದರೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಅವರು ಕಥೆ ರೆಡಿ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.










