ಬೆಂಗಳೂರು : ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ಬಿರುಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ ಉಂಟಾಗಿದೆ. ಕತ್ರಿಗುಪ್ಪೆ, ಕಾಮಾಕ್ಯ, ಉತ್ತರಹಳ್ಳಿ, ಚಾಮರಾಜಪೇಟೆ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರದಲ್ಲಿ ಮಳೆ ಅಬ್ಬರ ಜೋರಾಗಿತ್ತು.
ಉತ್ತರಹಳ್ಳಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜನರು ಅಹೋರಾತ್ರಿ ಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೈಸೂರು ರೋಡ್ ನಲ್ಲಿ ಕಾರು, ಬೈಕ್ ಗಳು ಜಲಾವೃತಗೊಂಡಿದ್ದವು. ಚಾಮರಾಜಪೇಟೆಯಲ್ಲಿ ಬೃಹತ್ ಮರ ಧರೆಗುರುಳಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಟ ಅನುಭವಿಸಿದರು.
ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 50ಕ್ಕೂ ಹೆಚ್ಚು ಮನೆಗಳಿಗೆ ತಡ ರಾತ್ರಿ ಮಳೆ ನೀರು ನುಗ್ಗಿ ಅಕ್ಕಿ, ಬೇಳೆ ಸೇರಿದಂತೆ ದಿನಬಳಕೆ ವಸ್ತುಗಳು ಹಾಳಾಗಿವೆ. ಮಳೆಯಿಂದಾಗಿ ಶಿವಾಜಿನಗರದಲ್ಲಿ ಎಲ್ಲೆಡೆ ವಿದ್ಯುತ್ ಕಡಿತವಾಗಿದೆ. ಒಟ್ಟಿನಲ್ಲಿ ನಿನ್ನೆ ಸುರಿದ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.










