ಬೆಂಗಳೂರು : 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪದಡಿ ಬಾಲಕಿ ಮನೆಯವರು ವೃದ್ಧನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿ ಕೊಂದಿದ್ದಾರೆ ಎನ್ನಲಾದ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ಕುಪ್ಪಣ್ಣ ಕೊಲೆಯಾದ ವೃದ್ಧ. ಹಲವು ವರ್ಷಗಳಿಂದ ನಗರದ ಬಾಬುಸಾಪಾಳ್ಯದಲ್ಲಿ ವಾಸವಾಗಿದ್ದ. ವೃದ್ಧನ ಮನೆಯ ಪಕ್ಕದಲ್ಲೇ ಬಾಲಕಿಯ ಮನೆಯಿದ್ದು, ನಿನ್ನೆ ಸಂಜೆ ಬಾಲಕಿಯನ್ನ ಮನೆಗೆ ಕರೆದು ಪಾನೀಯದಲ್ಲಿ ಮತ್ತು ಬರುವ ಔಷಧಿ ಮಿಶ್ರಣ ಮಾಡಿ ಜ್ಯೂಸ್ ಕೊಟ್ಟಿದ್ದಾನೆ. ಬಳಿಕ ಪ್ರಜ್ಞೆತಪ್ಪಿದ ಬಾಲಕಿ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸಂಜೆಯಾದ್ರೂ ಮನೆಗೆ ಬಾರದಿದ್ದಾಗ ಬಾಲಕಿಗಾಗಿ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಜೆ ಕುಪ್ಪಣ್ಣನ ಮನೆಯಲ್ಲಿ ಅಸ್ವಸ್ಥವಾಗಿ ಬಿದ್ದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ತಕ್ಷಣವೇ ಪೋಷಕರು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಬಳಿಕ ನಡೆದ ಘಟನೆಯನ್ನು ಬಾಲಕಿ ಪೋಷಕರ ಮುಂದೆ ಹೇಳಿದ್ದಾಳೆ.
ತಕ್ಷಣವೇ ಕುಪ್ಪಣ್ಣನ ಮನೆಗೆ ಹೋದ ಕುಟುಂಬಸ್ಥರು ಕುಪ್ಪಣ್ಣನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಯ ಬಳಿ ಹೋಗಿ ನೋಡಿದಾಗ ವೃದ್ಧ ಕುಪ್ಪಣ್ಣ ಮೃತಪಟ್ಟಿದ್ದ. ಸದ್ಯ ಹೆಣ್ಣೂರು ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.










