ಬೆಳಗಾವಿ : ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ? ಎಂಬದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ಇದೀಗ ಮತ್ತೆ ಸಚಿವರಾಗಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ ‘ಅತಿ ಶೀಘ್ರದಲ್ಲೇ ಮತ್ತೆ ರಮೇಶ್ ಅಣ್ಣಾ ಜಾರಕಿಹೊಳಿ ಮಂತ್ರಿ ಆಗಲಿದ್ದಾರೆ. ನಮ್ಮ ಸಾಹುಕಾರ್ ನಮ್ಮ ಹೆಮ್ಮೆ ಎಂದು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಸಹೋದರ ಲಖನ್ ಜಾರಕಿಹೊಳಿ ಅಭಿಮಾನಿಗಳ ವಾಟ್ಸಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇನ್ನೂ ಹೊಸಪೇಟೆ ಬಿಜೆಪಿ ಕಾರ್ಯಕಾರಿಣಿ ಮೇಲೆ ಸಾಹುಕಾರ್ ಕಣ್ಣಿಟ್ಟಿದ್ದಾರಂತೆ. ಏ.16 ಹಾಗೂ 17ರಂದು ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಇದ್ದು, ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಅಮಿತ್ ಶಾ ಆಗಮಿಸುವ ಸಾಧ್ಯತೆ ಇದೆ. ಈ ವೇಳೆ ರಮೇಶ್ ಜಾರಕಿಹೊಳಿ ಅಮಿತ್ ಶಾ ಭೇಟಿಯಾಗಿ ಸಚಿವ ಸ್ಥಾನಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.










