ಅಥಣಿ : ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಲಕ್ಷ್ಮಣ ಸವದಿ ಅವರು ಸಿಎಂ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮನಸ್ಸಿಗೆ ಆದ ಬೇಸರದಿಂದ ಬಿಎಸ್ ವೈ ಹಾಗೇ ಹೇಳಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವರು ಸಿಎಂ ಬದಲಾವಣೆ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ಮನಸ್ಸಿಗೆ ನೋವಾಗಿ ಈ ಮಾತುಗಳನ್ನು ಹೇಳಿರಬಹುದು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಕುರಿತ ಚರ್ಚೆ ಅನಗತ್ಯವಾಗಿದ್ದು. ನಾಯಕತ್ವ ಬದಲಾವಣೆ ಪ್ರಶ್ನೆ ನಮ್ಮ ವರಿಷ್ಠರ ಮುಂದೆಯೂ ಇಲ್ಲ. ಕೊರೊನಾ ಸಂದರ್ಭದಲ್ಲಿ ಇಂತಹ ಚಟುವಟಿಕೆ ಸರಿಯಲ್ಲ, ಅಂತಾ ಭಾವನೆ ಇಟ್ಟುಕೊಂಡು ಅವರು ರಾಜೀನಾಮೆ ಬಗ್ಗೆ ಹೇಳಿರಬಹುದು ಎಂದು ಹೇಳಿದ್ದಾರೆ.
ಇನ್ನೂ ಹೆಚ್.ವಿಶ್ವನಾಥ್, ಉತ್ತರ ಕರ್ನಾಟಕ ಭಾಗದವರು ಸಿಎಂ ಆಗುವುದರಲ್ಲಿ ತಪ್ಪಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆ ವೈಯಕ್ತಿಕ ವಿಚಾರ. ಎಲ್ಲದಕ್ಕೂ ಹೈಕಮಾಂಡ್ ಇದೆ ಎಂದು ಸವದಿ ಹೇಳಿದರು.










