ತುಮಕೂರು: ಕರ್ನಾಟಕ ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಮಾಜಿ ಶಾಸಕ ಹೆಚ್.ನಿಂಗಪ್ಪ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನಿಂಗಪ್ಪ ಅವರು ಮುಂದೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂಗೆ ಮಾಜಿ ಶಾಸಕ ಹೆಚ್.ನಿಂಗಪ್ಪ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 2006 ರಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ನಿಂಗಪ್ಪ, ಬಳಿಕ 2013ರಲ್ಲಿ ಜೆಡಿಎಸ್ ನಿಂದ ಟಿಕೆಟ್ ಸಿಗದಿದ್ದ ಕಾರಣಕ್ಕೆ ಕೆಜೆಪಿಗೆ ಸೇರ್ಪಡೆಗೊಂಡು ಸ್ಪರ್ಧಿಸಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದ ಹೆಚ್ ನಿಂಗಪ್ಪ, ಮತ್ತೆ ಕಳೆದ 2018 ರಲ್ಲಿ ಜೆಡಿಎಸ್ ಗೆ ಮರಳಿದ್ದರು.
2018 ರಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಹೆಚ್.ನಿಂಗಪ್ಪ ನವರನ್ನು ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎಂದು ನೇಮಿಸಿ ಆದೇಶ ಪತ್ರ ನೀಡಿದ್ದರು. ಆದ್ರೆ ಅದು ಪತ್ರವಾಗಿಯೇ ಉಳಿಯಿತು. ಪಕ್ಷದ ಎಲ್ಲಾ ಚಟುವಟಿಕೆಗಳಿಂದ ನನ್ನ ದೂರ ಇಟ್ಟಿದ್ದರು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.










