ಮೂಡಿಗೆರೆ : ಕಣ್ಣಿಗೆ ಕಾಣೋ ದೇವರು ಅಂದರೆ ಅಪ್ಪ-ಅಮ್ಮ. ಭೂಮಿ ಮೇಲೆ ಮೋಸ ಮಾಡದಿರೋ ಎರಡೇ ಎರಡು ಜೀವಗಳಂದ್ರೆ ಅದೂ ಅಪ್ಪ-ಅಮ್ಮನೆ. ಆಧುನಿಕ ಭಾರತ ಎತ್ತ ಸಾಗುತ್ತಿದ್ಯೋ ಗೊತ್ತಿಲ್ಲ. ಹೆತ್ತವರಿಗೆ ಮಕ್ಕಳ ಮೇಲೆ ಪ್ರೀತಿ ಇಲ್ಲ. ಮಕ್ಕಳಿಗೆ ಹೆತ್ತವರ ಮೇಲೆ ಗೌರವವೂ ಇಲ್ಲ. ಹೆತ್ತವರು ಹಾಗೂ ಮಕ್ಕಳು ಇಬ್ಬರು ಮನುಷ್ಯತ್ವ ಹಾಗೂ ಮಾನವೀಯತೆಯನ್ನೂ ಕಳೆದುಕೊಂಡಿರೋದಕ್ಕೆ ಸಾವಿರಾರು ಉದಾಹರಣೆಗಳಿವೆ. ಅದರಲ್ಲು ಅಪ್ಪಟ ಮಲೆನಾಡು ಎನ್ನಿಸಿಕೊಂಡಿರೋ ಮೂಡಿಗೆರೆಯಲ್ಲಿ ನಡೆದಿರೋ ಘಟನೆಯನ್ನ ನೋಡಿದ್ರೆ ಆಧುನಿಕ ಭಾರತೀಯರಲ್ಲಿ ಮನುಷ್ಯತ್ವವೂ ಸತ್ತೋಗಿದ್ಯಾ ಎಂದು ಅನ್ನಿಸದೆ ಇರಲಾರದು. ಯಾಕೆಂದರೆ, ಹೆತ್ತ ಅಪ್ಪನೇ ಮಕ್ಕಳೊಂದಿಗೆ ನಡೆದಿಕೊಂಡಿರೋ ರೀತಿ ನೋಡಿದ್ರೆ ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು.
ಹೌದು…ತಾಲೂಕಿನ ಬಿಳಗುಳ ಗ್ರಾಮದ ಇಂದಿರಾನಗರ ವಾಸಿ ಹರೀಶ್ ಎಂಬುವವನು ಮಕ್ಕಳು ಕೀಟಲೇ ಮಾಡುತ್ತಾವೆಂದು ಮೂರು ಮಕ್ಕಳ ಕಾಲಿಗೆ, ಬೆನ್ನಿಗೆ ಬರೆ ಹಾಕಿದ್ದಾನೆ. ಎಳೆ ಕಂದಮ್ಮಗಳು ಕೂರಲು ಆಗದೆ, ನಡೆಯಲು ಆಗದೇ ನೋವಿನಿಂದ ನರಕಯಾತನೆ ಅನುಭವಿಸುತ್ತಿದ್ದಾವೆ. ಮಕ್ಕಳ ಸ್ಥಿತಿ ಕಂಡು ಅಸಹಾಯಕ ಹೆತ್ತೊಡಲು ಕಣ್ಣೀರಿಡುತ್ತಿದ್ದಾಳೆ. ಮಕ್ಕಳು ಗಲಾಟೆ ಮಾಡದೇ ದೊಡ್ಡವರು ಮಾಡಲು ಆಗುತ್ತಾ. ಭೂಮಿ ಮೇಲೆ ಗಲಾಟೆ ಮಾಡದ ಮಕ್ಕಳು ಇದ್ದಾವೆಯೆ. ಮಕ್ಕಳನ್ನ ಕಟ್ಟಿ ಹಾಕಿ ಬೆಳೆಸಲು ಸಾಧ್ಯವೇ. ಆದರೆ, ಮಕ್ಕಳು ಗಲಾಟೆ ಮಾಡ್ತಾವೆ, ಕೀಟಲೆ ಮಾಡುತ್ತಾವೆಂದು ಈ ರೀತಿ ಮನುಷ್ಯತ್ವ ಮರೆತು ಬರೆ ಹಾಕುತ್ತಾರೆ ಅಂದರೆ ಆಧುನಿಕ ಸಮಾಜದಲ್ಲಿ ಅಪ್ಪನ ಪ್ರೀತಿಯನ್ನ ಹುಡುಕುವಂತಾಗಿದೆ.
ಈ ಮಕ್ಕಳ ಸ್ಥಿತಿಯನ್ನ ಕಣ್ಣಾರೆ ಕಂಡರೆ ಕಲ್ಲು ಹೃದಯದಲ್ಲೂ ಕಣ್ಣೀರು ತರಿಸುತ್ತೆ. ಬಿಳಗುಳ ಗ್ರಾಮದ ಹರೀಶ್-ಪುಷ್ಪ ಎಂಬ ದಂಪತಿಗೆ ನಾಲ್ವರ ಮಕ್ಕಳು. ಎರಡು ಗಂಡು, ಎರಡು ಹೆಣ್ಣು. ಎಲ್ಲಾ ಮಕ್ಕಳು ಚಿಕ್ಕವು. ಒಂದು, ಎರಡು, ಮೂರನೇ ತರಗತಿ ಓದುತ್ತಿರೋ ಮಕ್ಕಳು. ಅಂದರೆ ಸರಿಸುಮಾರು ಐದು, ಆರು, ಏಳು ವರ್ಷದ ಮಕ್ಕಳು. ಮಕ್ಕಳು ಕೀಟಲೆ ಮಾಡುತ್ತಾರೆಂದು ಅಪ್ಪ ಎಂಬ ಪ್ರಾಣಿ ದೋಸೆ ಕಡ್ಡಿಯನ್ನ ಕಾಯಿಸಿ ನಾಲ್ವರಲ್ಲಿ ಮೂವರಿಗೆ ಕಾಲು, ಕೈ, ಬೆನ್ನಿಗೆ ಬರೆ ಹಾಕಿದ್ದಾನೆ. ಇಬ್ಬರು ಗಂಡು ಮಕ್ಕಳು ಕಾಲಿಗೆ ಬ್ಯಾಂಡೇಜ್ ಕಟ್ಕೊಂಡ್ ತೆವಳುತ್ತಾ ಸಾಗುತ್ತಿದ್ದರೆ, ಮಗಳ ಕೈಗೆ ಹಾಕಿರೋ ಬರೆಯಿಂದ ಕೈಯನ್ನ ಎತ್ತಾಡದಂತಾಗಿದ್ದರೆ ಮುಖ, ಹಣೆಯನ್ನೆಲ್ಲಾ ಕಿತ್ತು ಹಾಕಿದ್ದಾನೆ ಅಪ್ಪ. ಅಸಹಾಯಕಿ ಅಮ್ಮ, ಕೂಲಿಗೆ ಹೋಗಿ ಬಂದು ಮಕ್ಕಳನ್ನ ಸಾಕುತ್ತಿದ್ದಾಳೆ. ಘಟನೆ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗಾಯಗೊಂಡ ಮಕ್ಕಳ ತಾಯಿ ಪುಷ್ಪ ಅವರು ನನ್ನ ಗಂಡ ಬರೆ ಹಾಕಿದ್ದಾನೆ. ಏಕೆ ಹೀಗೆ ಮಾಡಿದೆಯಾ ಎಂದು ಕೇಳಿದರೆ ಮಕ್ಕಳು ತರಲೆ ಮಾಡುತ್ತಾರೆ ಎಂದು ಹೇಳುತ್ತಾನೆ. ನಾನು ಕೆಲಸಕ್ಕೆ ಹೋದಾಗ ಮಕ್ಕಳಿಗೆ ಹೀಗೆ ಬರೆ ಹಾಕಿದ್ದಾನೆ. ಒಂದು ವರ್ಷದ ಹಿಂದೆ ಕುಡಿದು ಬಂದು ಮನೆಗೆ ಬೆಂಕಿ ಇಟ್ಟಿದ್ದ. ಆಗ ಕೂಡ ಜೈಲಿಗೆ ಹೋಗಿ ಬಂದಿದ್ದ. ಆಗ ನಾನೇ ಬುದ್ಧಿ ಕಲಿತಿದ್ದಾನೆ ಎಂದು ತಿಳಿದು ಜಾಮೀನು ಕೊಟ್ಟು ಕರೆದುಕೊಂಡು ಬಂದಿದ್ದೆ. ದಿನನಿತ್ಯ ಮಕ್ಕಳಿಗೆ ವೈರಿನಿಂದ ಹೊಡೆಯುತ್ತಾನೆ. ನಾನು ಮಕ್ಕಳಿಗೋಸ್ಕರ ಜೀವ ಇಟ್ಟುಕೊಂಡಿದ್ದೇನೆ ಎಂದು ಅವಲತ್ತು ತೋಡಿಕೊಂಡಿದ್ದಾರೆ.
ವರ್ಷದ ಹಿಂದೆಯೂ ಪತ್ನಿಗೆ ಹೊಡೆದು, ಮನೆಗೆ ಬೆಂಕಿ ಇಟ್ಟಿದ್ದನಂತೆ ಹರೀಶ್. ಮಕ್ಕಳಿಗೆ ಕೈಗೆ ಸಿಕ್ಕಿದ್ರಲ್ಲಿ ಹೊಡೆಯುತ್ತಿದ್ದನಂತೆ. ಆಗ ಪತಿ ವಿರುದ್ಧ ಪತ್ನಿಯೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿ ಜೈಲಿಗೆ ಕಳುಹಿಸಿದ್ದಳು. ನನ್ನ ಗಂಡನಿಗೆ ಒಳ್ಳೆ ಬುದ್ಧಿ ಬರಬಹುದೆಂದು ಮತ್ತೆ ತಾನೇ ಜಾಮೀನು ನೀಡಿ ಬಿಡಿಸಿಕೊಂಡು ಬಂದಿದ್ದಳು. ಈಗ ಮತ್ತೆ ಮಕ್ಕಳ ಜೊತೆ ಗಂಡನ ಕ್ರೂರತ್ವದಿಂದ ರೋಸಿ ಮತ್ತೆ ದೂರು ನೀಡಿದ್ದಾಳೆ. ಮಕ್ಕಳ ಮೇಲೆ ಕ್ರೌರ್ಯ ಮೆರೆದು ಮತ್ತೆ ಬಂಧನಕ್ಕೊಳಗಾದರು ಮಣಿ ಎಂಬುವನು ಜಾಮೀನು ನೀಡಿ ಬಿಡಿಸಿಕೊಂಡು ಬಂದಿದ್ದಾನೆ. ಕೂಲಿ ಮಾಡಿಕೊಂಡು 4 ಮಕ್ಕಳನ್ನ ಸಾಕುತ್ತಿರೋ ತಾಯಿಯೂ ನಿತ್ಯ ಕುಡಿದು ಬಂದು ವಿಕೃತಿ ಮೆರೆಯೋ ಗಂಡನಿಂದ ರೋಸಿ ಹೋಗಿ, ಮಕ್ಕಳೊಂದಿಗೆ ತವರು ಮನೆ ಸೇರಿದ್ದಾಳೆ. ಸ್ಥಳಿಯರ ನೆರವಿನಿಂದ ಮಕ್ಕಳಿಗೆ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸ್ಥಳೀಯರಾದ ಮೊಹಿನುದ್ದಿನ್, ಅವರು ಸ್ವಲ್ಪ ಜಾಸ್ತಿ ಸಾರಾಯಿ ಕುಡಿಯುತ್ತಾರೆ. ಕಲ್ಚರ್ ಇಲ್ಲ. ಮಕ್ಕಳು ಅಂದರೆ ಏನು ಎಂದು ಗೊತ್ತಿಲ್ಲ. ಕುಡಿದು ಬಂದು ಟಾರ್ಚರ್ ಕೊಡುತ್ತಾನೆ. ತನ್ನ ಮನೆಗೆ ತಾನೇ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ. ಇದು ಕ್ರೂರತನ. ಯಾರು ಇಂತಹಾ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಪ್ರೀತಿ ಕೊಟ್ಟು ಬೆಳೆಸಬೇಕಾದ ಅಪ್ಪನೇ ಇಲ್ಲಿ ಮಕ್ಕಳಿಗೆ ವಿಲನ್ ಆಗಿದ್ದಾನೆ. ಪತಿಯ ಕಾಟ ತಾಳಲಾಗದೆ ಪತ್ನಿ ತಾಯಿ ಮನೆಯಲ್ಲಿ ಬದುಕುತ್ತಿದ್ದಾಳೆ. ಕೂಲಿಗೆ ಹೋಗಿ ಬಂದು ಮಕ್ಕಳನ್ನ ನೋಡಿಕೊಳ್ತಿದ್ದಾಳೆ. ಅಂದೇ ದುಡಿದು ಅಂದೇ ತಿನ್ನಬೇಕಾದ ಸ್ಥಿತಿಯಲ್ಲಿರೋ ಅಮ್ಮನಿಗೆ ಮಕ್ಕಳದ್ದೇ ಚಿಂತೆ. ಸ್ಥಳಿಯರು ಕೂಡ ಮಕ್ಕಳನ್ನ ಹಾಸ್ಟೇಲ್ಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ. ಮಕ್ಕಳ ಕಾಲು ಹುಷಾರದ ಮೇಲೆ ಹಾಸ್ಟೆಲ್ಗೆ ಸೇರಿಸುತ್ತೇವೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರತನ್ ಕುಮಾರ್ ಹಾಗೂ ಸದಸ್ಯರು ಭರವಸೆ ನೀಡಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಸರ್ಕಾರ ಅಥವ ಅಧಿಕಾರಿಗಳು ಮಕ್ಕಳಿಗೊಂದು ದಾರಿ ಮಾಡಲಿ ಅನ್ನೋದು ಸ್ಥಳಿಯರ ಬಯಕೆ.