ಕೊಟ್ಟಿಗೆಹಾರ:ದಾಸರಹಳ್ಳಿ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರು ಕಲುಷಿತಗೊಂಡು ಸರಬರಾಜಾಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಕ್ತ ಶುದ್ಧೀಕರಣ ವ್ಯವಸ್ಥೆ ಇಲ್ಲದೆ ಇದೇ ನೀರನ್ನು ನಲ್ಲಿಗಳ ಮೂಲಕ ಮನೆಗಳಿಗೆ ಪೂರೈಸಲಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಧಿಕಾರಿಗಳಿಗೆ, ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ, ಈವರೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸರ್ಕಾರ ಶುದ್ಧ ಕುಡಿಯುವ ನೀರಿನ ಯೋಜನೆಗಳಿಗಾಗಿ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದ್ದರೂ, ದಾಸರಹಳ್ಳಿಯ ಜನರಿಗೆ ಕಲುಷಿತ ನೀರೇ ಗತಿಯಾಗಿದೆ. ತಕ್ಷಣವೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಶಾಶ್ವತ ಪರಿಹಾರ ಒದಗಿಸಬೇಕು. ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಗ್ರಾ.ಪಂ ಕಚೇರಿಯ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.










